ವಿರಾಜಪೇಟೆ ಜ.16 NEWS DESK : ಇತ್ತೀಚಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪೋಷಕರು ಹಾಗೂ ಶಿಕ್ಷಕರು ಶತ್ರುಗಳಾಗಿ ಪರಿಣಮಿಸುತ್ತಿದ್ದಾರೆ. ಏಕೆಂದರೆ ವಿದ್ಯಾರ್ಥಿಗಳಿಗೆ ಪದೇಪದೇ ಮಾರ್ಗದರ್ಶನ ಮಾಡುತ್ತಿರುವುದು ಅವರಿಗೆ ಸದಾ ಕಿರಿಕಿರಿಯಾಗಿರುತ್ತದೆ. ವಿದ್ಯುನ್ಮಾನ ಉಪಕರಣಗಳಿಂದ ಹಾಗೂ ದುಶ್ಚಟಗಳಿಂದ ಅವರನ್ನು ಬೇರ್ಪಡಿಸಲು ಪೋಷಕರು ಹಾಗೂ ಶಿಕ್ಷಕರು ಪ್ರಯತ್ನಿಸುತ್ತಿರುವುದು ಬಹಳ ಶೋಚನೀಯ ಎಂಬುದು ಕೆಲವರ ಮನೋಭಾವನೆ ಎಂದು ತಿತಿಮತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಚಾರ್ಲ್ಸ್ ಡಿಸೋಜಾ ಅಭಿಪ್ರಾಯಪಟ್ಟರು. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪೋಷಕರ ನಿರಂತರ ಮಾರ್ಗದರ್ಶನ ಪ್ರತೀ ವಿದ್ಯಾರ್ಥಿಗೂ ಅತ್ಯಗತ್ಯವಾಗಿದೆ ಎಂದು ಹೇಳಿದರು. ವಿರಾಜಪೇಟೆ ಸರ್ಕಾರಿ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಎನ್.ಕೆ.ಜ್ಯೋತಿ ಮಾತನಾಡಿ, ಮಕ್ಕಳು ಸದಾ ಆಶೋತ್ತರಗಳಿಂದ ಕೂಡಿದ್ದು, ಸಿಗುವಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಾಗೆಯೇ ಗುರುಗಳು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುತ್ತಾರೆ.ಅವರಿಗೆ ಸದಾ ವಿನಯಶೀಲರಾಗಿ, ಕಾಲಹರಣ ಮಾಡದೆ ತಮ್ಮ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಕರೆ ನೀಡಿದರು. ಬಾಳೆಲೆಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕಾಯ೯ದಶಿ೯ ಕೃಷ್ಣ ಗಣಪತಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ವಿಶೇಷವಾಗಿ ಉತ್ತಮ ದೈಹಿಕ ಸಾಮರ್ಥ್ಯವನ್ನು ಹೊಂದಿದ್ದು , ಬಡತನದಲ್ಲಿಯೂ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಸದಾ ಅವಕಾಶವಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ತಿತಿಮತಿ ಕೃಷಿಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ಸೂಸಲು ಕಾಲೇಜು ವಾರ್ಷಿಕೋತ್ಸವ, ಕಲೋತ್ಸವ, ಪ್ರತಿಭಾ ಉತ್ಸವಗಳು ಪೂರಕವಾಗಿವೆ ಎಂದರು. ವೇದಿಕೆಯಲ್ಲಿ ನಿವೃತ್ತ ಉಪನ್ಯಾಸಕ ಎನ್.ಕೆ. ಶಂಭು, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಮಂಗಳ, ಶಾಲಾಭಿವೃದ್ಧಿಸಮಿತಿಯ ಸದಸ್ಯರು, ಉಪನ್ಯಾಸಕರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.