ಮಡಿಕೇರಿ ಜ.17 NEWS DESK : ಸೋಮವಾರಪೇಟೆ ತಾಲ್ಲೂಕಿನ ಐಗೂರು ಗ್ರಾ.ಪಂ ವ್ಯಾಪ್ತಿಯ ಯಡವನಾಡು ಗ್ರಾಮದಲ್ಲಿ ರೂ.40 ಲಕ್ಷ ವೆಚ್ಚದ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, 2021ರಲ್ಲಿ ಮುಂಗಾರು ಮಳೆಯ ಸಂದರ್ಭ ಕುಸಿದಿದ್ದ ಸೇತುವೆಯನ್ನು ಮರು ನಿರ್ಮಾಣ ಮಾಡುವ ಭರವಸೆಯನ್ನು ನಾನೇ ನೀಡಿದ್ದೆ,ಕೆಆರ್‌ಡಿಎಲ್ ಇಲಾಖೆ ಮುಖಾಂತರ ಅನುದಾನ ನೀಡಲಾಗಿದೆ. ಸೇತುವೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡರೆ ಅನುದಾನ ತಂದಿದಕ್ಕೂ ಸಾರ್ಥಕತೆ ಇರುತ್ತದೆ. ಗುತ್ತಿಗೆದಾರರು ಈ ಬಗ್ಗೆ ಗಮನಹರಿಸಬೇಕು. ಕಳಪೆ ಕಾಮಗಾರಿಯ ಬಗ್ಗೆ ಗ್ರಾಮಸ್ಥರಿಗೆ ಅನುಮಾನ ಬಂದರೆ ದೂರು ನೀಡಬಹುದು ಎಂದು ಹೇಳಿದರು. ಸೇತುವೆಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸಲು ಅಕ್ಕಪಕ್ಕದ ಜಾಗದ ಮಾಲೀಕರು ಸಹಕರಿಸಬೇಕೆಂದರು. ಐಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ, ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ವಲಯಾಧ್ಯಕ್ಷ ಕೆ.ಎಲ್. ಹೊನ್ನಪ್ಪ, ಪ್ರಮುಖರಾದ ರಮೇಶ್, ಮಚ್ಚಂಡ ಅಶೋಕ್, ಕೆ.ಪಿ. ದಿನೇಶ್, ಎಸ್.ಎನ್. ಯೋಗೇಶ್, ಸಬಿತಾ ಚೆನ್ನಕೇಶವ, ವಿಶ್ವನಾಥ ರಾಜೇ ಅರಸ್ ಭುಜಂಗ, ಜಯಪ್ರಕಾಶ್, ಅಭಿಯಂತರ ಶರತ್ ಹಾಗೂ ಗ್ರಾಮಸ್ಥರು, ಅಧಿಕಾರಿಗಳು ಹಾಜರಿದ್ದರು.