ಸೋಮವಾರಪೇಟೆ ಜ.18 NEWS DESK : ಗ್ಯಾರೆಂಟಿ ಯೋಜನೆಗಳಿಂದ ಮಹಿಳೆಯರು ಸಬಲರಾಗುತ್ತಿದ್ದು, ರಾಜ್ಯ ಸರ್ಕಾರ ಮಹಿಳೆಯರ ಪರವಾಗಿದೆ ಎಂದು ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್ ತಿಳಿಸಿದರು.
ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ಸ್ ನಿಲ್ದಾಣದಲ್ಲಿ ಮಹಿಳೆಯರೊಂದಿಗೆ ಸಂವಾದನಡೆಸಿ ಮಾತನಾಡಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಷ್ಟ್ರದಲ್ಲಿ ಹೆಸರುವಾಸಿಯಾಗಿದೆ ಎಂದರು. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಪಡೆದರು. ಈ ಸಂದರ್ಭ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಿಂದ ಚಿನ್ನ ಖರೀದಿಸಲು ಮತ್ತೊಬ್ಬರು ವೈದ್ಯಕೀಯ ವೆಚ್ಚಕ್ಕಾಗಿ ಬಳಸುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭ ಕೆಲವು ತಿಂಗಳ ಹಣ ಬರದೆ ಇರುವ ಬಗ್ಗೆ ಗಮನ ಸೆಳೆದಾಗ ಸದ್ಯದಲ್ಲೇ ಒಟ್ಟಿಗೆ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು. ಕೆಲವರಿಗೆ ಅನ್ನಭಾಗ್ಯ ಯೋಜನೆಗೆ ಪಡಿತರ ಚೀಟಿ ಸಮಸ್ಯೆಯಾಗಿರುವ ಬಗ್ಗೆ ಕೆಲವರು ಅಧ್ಯಕ್ಷರನ್ನು ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ಆಹಾರ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ಇದೆ ಸಂದರ್ಭ ಉಜ್ವಲ ಯೋಜನೆಯ ಸಬ್ಸಿಡಿ ಹಣ ಬರುತ್ತಿದೆಯೇ ಎಂದು ಪುಷ್ಪ ಅಮರನಾಥ್ ಪ್ರಶ್ನೆಗೆ ಇಲ್ಲಾ ಎಂದು ಮಹಿಳೆಯರು ಉತ್ತರಿಸಿದಕ್ಕೆ ಸುಳ್ಳು ಆಶ್ವಾಸನೆ ನೀಡಿದವರು ಯಾರು, ಯಾವ ಸರ್ಕಾರ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದರು.ಈ ಸಂದರ್ಭ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತರಾಜು ಹಾಗೂ ಸಮಿತಿಯ ಸದಸ್ಯರುಗಳು, ತಹಶೀಲ್ದಾರ್ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಹಾಗೂ ಪಕ್ಷದ ಪ್ರಮುಖರು ಹಾಜರಿದ್ದರು.