ಮಡಿಕೇರಿ NEWS DESK ಜ.18 : ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಾಲಯದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ನಡೆಸುವ ಶಾಂತಿ ಸಂಧಾನ ಪ್ರಕ್ರಿಯೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿರುವ ಅಖಿಲ ಕೊಡವ ಸಮಾಜ, ಎರಡೂ ಜನಾಂಗದವರು ಪರಸ್ಪರ ಪ್ರತಿಭಟನೆ ನಡೆಸದಂತೆ ಮನವಿ ಮಾಡಿದೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಕಹಿ ಘಟನೆಯನ್ನು ಮರೆತು ಶಾಂತಿಯನ್ನು ಕಾಪಾಡಬೇಕಾಗಿದೆ, ದೇವಾಲಯದಲ್ಲಿ ನಡೆದ ಘಟನೆಯ ಬಗ್ಗೆ ಎರಡೂ ಕಡೆಯವರಲ್ಲಿ “ಹೀಗಾಗಬಾರದಾಗಿತ್ತು” ಎನ್ನುವ ಬೇಸರವಿದೆ. ಒಬ್ಬರು ಪ್ರತಿಭಟನೆ ನಡೆಸಿದರೆ, ಮತ್ತೊಬ್ಬರು ಪ್ರತಿಭಟನೆಗೆ ಮುಂದಾಗುತ್ತಾರೆ, ಇದರಿಂದ ಯಾರಿಗೂ ಲಾಭವಿಲ್ಲ. ಆದ್ದರಿಂದ ಆದಷ್ಟು ಬೇಗ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸಂಧಾನಕ್ಕೆ ವೇದಿಕೆ ಸಿದ್ಧಗೊಳಿಸಬೇಕು ಎಂದು ಒತ್ತಾಯಿಸಿದರು.
ಕೊಡವರಿಗೆ ಎಲ್ಲಾ ಜನಾಂಗದವರ ಮೇಲೆ ಗೌರವವಿದೆ, ಹಲವು ದೇವಸ್ಥಾನಗಳಲ್ಲಿ ಭಂಡಾರ ತಕ್ಕರಾಗಿ ಅರೆಭಾಷಿಕ ಜನಾಂಗ ಬಾಂಧವರು ಕೊಡವ ಜನಾಂಗದವರೊAದಿಗೆ ಸೇರಿ ಶಾಂತಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗಿನ ಜನಜೀವನದಲ್ಲಿ ಅವರು ಕೂಡ ಅವಿಭಾಜ್ಯ ಅಂಗವಾಗಿದ್ದಾರೆ. ಒಂದಿಬ್ಬರು ಮಾಡಿದ ತಪ್ಪಿಗೆ ಇಡೀ ಜನಾಂಗವನ್ನು ಅವಹೇಳನ ಮಾಡುವುದು ಅಥವಾ ದೂಷಿಸುವುದು ಸರಿಯಲ್ಲ ಮತ್ತು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು.
ಒಂದು ಜನಾಂಗದವರು ಪ್ರತಿಭಟನೆಯನ್ನು ಶಾಂತಿಯುತವಾಗಿ ಮಾಡಿದರೂ ಅದಕ್ಕೆ ಪ್ರತಿಯಾಗಿ ಇನ್ನೊಂದು ಸಮುದಾಯ ಪ್ರತಿಭಟನೆ ನಡೆಸುವುದು ಸ್ವಾಭಾವಿಕವಾಗಿದೆ. ಇದು ಕೊಡಗು ಜಿಲ್ಲೆಯ ಸ್ವಾಸ್ಥö್ಯದ ದೃಷ್ಟಿಯಿಂದ ಆರೋಗ್ಯಕರವಲ್ಲ. ಕೊಡವರು, ಕೊಡವ ಭಾಷಿಕ ಜನಾಂಗದವರು ಹಾಗೂ ಕೊಡವ ಭಾಷೆಯ ಅಭಿಮಾನಿಗಳು ಬೃಹತ್ ಪ್ರತಿಭಟನೆ ಆಯೋಜಿಸುವುದಕ್ಕೆ ತಯಾರಿ ನಡೆಸಬಹುದು. ಇದರಿಂದ ಯಾರಿಗೂ ಲಾಭವಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಪರದಂಡ ಸುಬ್ರಮಣಿ ಅವರು, ಶಾಂತಿ ಸಂಧಾನದ ಮೂಲಕ ಕಾರ್ಮೋಡದ ನಡುವೆ ಬೆಳ್ಳಿಗೆರೆ ಮೂಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ::: ಯಾವುದೇ ಕ್ರಮವಾಗಿಲ್ಲ ::: ಶ್ರೀ ಮಹಾ ಮೃತ್ಯುಂಜಯ ದೇವಾಲಯದಲ್ಲಿ ಡಿ.27 ರಂದು ಸಂಜೆ ಎದುರಾದ ಭಿನ್ನಾಭಿಪ್ರಾಯದ ಸಂದರ್ಭ ಕೊಡವರ ಮೇಲೆ ಕೆಲವರು ಹಲ್ಲೆ ನಡೆಸಿದ್ದು, ಇವರ ವಿರುದ್ಧ ದೂರು ನೀಡಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಕೀತಿಯಂಡ ವಿಜಯ ಕುಮಾರ್ ಮಾತನಾಡಿ ಶಾಂತಿ ಸಂಧಾನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ, ಆದರೆ ಹಲ್ಲೆ ನಡೆಸಿದವರ ವಿರುದ್ಧ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎನ್ನುವುದನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡವ ಸಮಾಜದ ಸದಸ್ಯ ಚನ್ನಪಂಡ ದರ್ಶನ್ ಹಾಗೂ ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಅಧ್ಯಕ್ಷ ಶಾಂತೆಯಂಡ ನಿರನ್ ಉಪಸ್ಥಿತರಿದ್ದರು.