ಸುಂಟಿಕೊಪ್ಪ ಜ.18 NEWS DESK : ಸರಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಜ.19 ರಂದು ಗುರು ಶಿಷ್ಯರ ಸಮ್ಮಿಲನ ಮತ್ತು ಸ್ನೇಹ ಸಂಗಮ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವೈ.ಶಿವರಾಮಯ್ಯ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಲಿದ್ದಾರೆ. ನಂತರ ವಿದ್ಯ ಕಲಿಸಿದ ಹಿರಿಯ ಗುರುಗಳನ್ನು ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೂಲಕ ಮೆರವಣಿಗೆಯಲ್ಲಿ ಸಭಾ ಕಾರ್ಯಕ್ರಮಕ್ಕೆ ಕರೆತರಲಾಗುವುದು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಳೆ ವಿದ್ಯಾರ್ಥಿ, ಹಾಲಿ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಂ.ಜಿ.ಸುಕುರೆ ಕುಮಾರ್ ವಹಿಸಲಿದ್ದಾರೆ. ಸಂಜೆ ಸಮಾರೋಪ ಸಭೆ ನಡೆಯಲಿದ್ದು, ಶಾಲೆಯ ಹಳೆಯ ವಿದ್ಯಾರ್ಥಿ ಬೆಂಗಳೂರು ಬಿಬಿಎಂಪಿಯ ಸಹಾಯಕ ಆಯುಕ್ತ ಪಿ.ಎಸ್.ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಲೆಗೆ ಸ್ಥಳದಾನ ಮಾಡಿದ ಶಾಲಾ ಕೊಠಡಿಗಳನ್ನು ಕಟ್ಟಿಸಿಕೊಟ್ಟ ದಾನಿಗಳಾದ ಮಾಜಿ ಶಾಸಕರು ಕೆ.ಎಂ.ಇಬ್ರಾಹಿಂ, ಬೆಟ್ಟಗೇರಿ ಸಮೂಹ ತೋಟಗಳ ಮಾಲೀಕ ಡಿ.ವಿನೋದ್ ಶಿವಪ್ಪ, ಪನ್ಯ ತೋಟದ ಮಾಲೀಕ ಆನಂದ್ ಬಸಪ್ಪ, ಜವರಯ್ಯ, ಪಾಂಡಂಡ ಕುಟುಂಬದ ಹಿರಿಯರು ಮತ್ತು ಪಟ್ಟೆಮನೆ ಕುಟುಂಬಸ್ಥರನ್ನು ಸನ್ಮಾನಿಸಲಾಗುತ್ತದೆ. ಗುರು ಶಿಷ್ಯರ ಸಮ್ಮಿಲನ ಮತ್ತು ಸ್ನೇಹ ಸಂಗಮ ಕಾರ್ಯಕ್ರಮದ ಅಂಗವಾಗಿ ಭವ್ಯವಾದ ವೇದಿಕೆ ಸೇರಿದಂತೆ ಬ್ಯಾನರ್ ಹಾಗೂ ಧ್ವಜಗಳನ್ನು ಪಟ್ಟಣದಲ್ಲಿ ಅಳವಡಿಸುವ ಮೂಲಕ ಅದ್ಧೂರಿ ಕಾರ್ಯಕ್ರಮಕ್ಕೆ ಸರಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಜ್ಜುಗೊಳಿಸುತ್ತದ್ದಾರೆ.