ಮಡಿಕೇರಿ NEWS DESK ಜ.20 : ಅರೆಭಾಷಿಕ ಗೌಡ ಜನಾಂಗವನ್ನು ತೇಜೋವಧೆ ಮಾಡಿದವರ ವಿರುದ್ಧ ದೂರು ನೀಡಿದ್ದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ ಅರೆಭಾಷೆ ಗೌಡರ ವಿವಿಧ ಸಂಘಟನೆಗಳು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು. ನಗರದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಿದ ಅರೆಭಾಷಿಕ ಗೌಡರು ಪ್ರಚೋದನೆಯ ಹೇಳಿಕೆಗಳನ್ನು ನೀಡಿ ಶಾಂತಿ ಕದಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಜನಾಂಗದ ನಿಂದನೆ, ಅಪಮಾನ, ಕಪೋಲ ಕಲ್ಪಿತ ಇತಿಹಾಸ ಸೃಷ್ಟಿಸಿ ಪ್ರಚೋದನೆ ನೀಡಿದ ಆರೋಪದಡಿ ಮಡಿಕೇರಿ ನಗರ ಪೋಲಿಸ್ ಠಾಣೆ ಹಾಗೂ ಪೋಲಿಸ್ ಅಧೀಕ್ಷಕರಿಗೂ ದೂರು ನೀಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ವಿವಿಧ ಗೌಡ ಸಮಾಜಗಳು, ಗೌಡ ಯುವಕ ಸಂಘ, ಕೊಡಗು ಗೌಡ ಯುವ ವೇದಿಕೆ, ಕೊಡಗು ಗೌಡ ಮಹಿಳಾ ಒಕ್ಕೂಟ ಸೇರಿದಂತೆ ಅರೆಭಾಷಿಕ ಗೌಡ ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.