ಮಡಿಕೇರಿ NEWS DESK ಜ.24 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಆರಂಭಗೊಂಡ ಆರೋಪ, ಪ್ರತ್ಯಾರೋಪಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎರಡೂ ಕ್ಷೇತ್ರಗಳ ಶಾಸಕರುಗಳು ತಕ್ಷಣ ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಧಾನ ಸಂಚಾಲಕರಾದ ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶ್ರದ್ಧಾಭಕ್ತಿಯ ಕೇಂದ್ರ ಮತ್ತು ಒಗ್ಗಟ್ಟನ್ನು ಸಾರುವ ದೇವಾಲಯದ ವಿಚಾರವನ್ನು ಮುಂದಿಟ್ಟುಕೊಂಡು ದ್ವೇಷವನ್ನು ಬೆಳೆಸುತ್ತಾ ಹೋಗುವುದು ಸರಿಯಲ್ಲ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಜನಾಂಗೀಯ ಸಂಘರ್ಷಕ್ಕೆ ಎಡೆಮಾಡದೆ ಆಡಳಿತ ಪಕ್ಷದ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಬೇಕೆಂದು ಆಗ್ರಹಿಸಿದ್ದಾರೆ. ಕೊಡಗು ಜಿಲ್ಲೆಯ ಗೌರವಕ್ಕೆ ದಕ್ಕೆ ಬರಬಹುದಾದ ಇಂತಹ ವಿಚಾರಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ಅಸಡ್ಡೆ ತೋರುವುದು ಸರಿಯಲ್ಲ. ಈಗಾಗಲೇ ಗೊಂದಲ ಏರ್ಪಟ್ಟು ಒಂದೂವರೆ ತಿಂಗಳು ಕಳೆದು ಹೋಗಿದೆ. ಪರಸ್ಪರ ಹೇಳಿಕೆ, ಪ್ರತಿ ಹೇಳಿಕೆಗಳನ್ನು ನೀಡುತ್ತಿರುವುದರಿಂದ ದ್ವೇಷದ ಕಿಚ್ಚು ವ್ಯಾಪಿಸುವ ಅಪಾಯವಿದೆ. ಇದಕ್ಕೆ ಕಾಲಾವಕಾಶ ನೀಡದೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಶೀಘ್ರ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಬೇಕು ಎಂದು ತಿಳಿಸಿದ್ದಾರೆ. ದೇವಾಲಯದ ವಿಚಾರದಲ್ಲಿ ಯಾರೂ ರಾಜಕೀಯ ಲಾಭ, ನಷ್ಟದ ಲೆಕ್ಕಚಾರ ಮಾಡಬಾರದು. ಜನರಿಂದ ಆಯ್ಕೆಯಾಗಿ ಬಂದವರು ಜನರ ಶಾಂತಿಗಾಗಿ ಮಿಡಿಯಬೇಕು. ಈ ರೀತಿಯ ಸೂಕ್ಷ್ಮ ವಿಚಾರಗಳಲ್ಲಿ ನಮಗೇನು ಸಂಬಂಧವೇ ಇಲ್ಲ, ಅಧಿಕಾರಿಗಳೇ ಎಲ್ಲಾ ಸರಿ ಮಾಡುತ್ತಾರೆ ಎಂದು ಜಾಣ ಮೌನಕ್ಕೆ ಶರಣಾಗುವುದು ಸರಿಯಲ್ಲ ಎಂದು ತೇಲಪಂಡ ಶಿವಕುಮಾರ್ ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.