ವಿರಾಜಪೇಟೆ ಜ.26 NEWS DESK : ಕೊಡಗು ಜಿಲ್ಲಾ ಪಂಚಾಯಿತಿ, ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಮತ್ತು ಆರ್ಜಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಬೇಟೋಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು. ಆರ್ಜಿ ಗ್ರಾ.ಪಂ ಅಧ್ಯಕ್ಷರಾದ ಫಾತಿಮ ರೆಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಕುರಿತು ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಆರ್ಜಿ ಗ್ರಾ.ಪಂ ಕಾರ್ಯದರ್ಶಿ ಆರ್.ರಾಜನ್, ಮಕ್ಕಳ ಮೇಲಾಗುವ ದೌರ್ಜನ್ಯಗಳು, ಎದುರಿಸುವ ಸಮಸ್ಯೆಗಳಿಗೆ ಗ್ರಾ.ಪಂ ಮಟ್ಟದಲ್ಲಿ ಇತ್ಯರ್ಥವಾಗಲೆಂದು ಸರ್ಕಾರವು ಮಕ್ಕಳ ಹಕ್ಕುಗಳನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳ ಗ್ರಾಮ ಸಭೆಯನ್ನು ಅನುಷ್ಠಾನಗೊಳಿಸಿದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಭೆಯಲ್ಲಿ ತಿಳಿಸಬಹುದಾಗಿದೆ ಎಂದು ಹೇಳಿದರು. ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಣೆ ಗ್ರಾಮದಿಂದ ನಗರಕ್ಕೆ ತೆರಳಲು ಸುಮಾರು ಮೂರು ಕಿ.ಮೀ ಗಳಾಗುತ್ತದೆ. ಆರೋಗ್ಯ ಸಮಸ್ಯೆ ಎದುರಾದಲ್ಲಿ ಸ್ಥಳೀಯವಾಗಿ ಬಗೆಹರಿಸಲು ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ ಎಂದು ಆಂಗ್ಲಾ ಮಾದ್ಯಮ ಶಾಲೆಯ ವಿಧ್ಯಾರ್ಥಿನಿ ಸಭೆಯಲ್ಲಿ ಬೇಡಿಕೆಯಿಟ್ಟರು. ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಶಾಲೆ ಬಿಡುವ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಭಯವಾಗುತ್ತದೆ ಆದುದರಿಂದ ನಾಮ ಫಲಕ ಮತ್ತು ರಸ್ತೆ ಹುಬ್ಬು ಹಾಕುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರು. ಆರ್ಜಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೆ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ಪಂಚಾಯಿತಿ ಅಧ್ಯಕ್ಷರು ಹೇಳಿದರು. ಆರ್ಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಜೆ 5 ರಿಂದ ಕೆಲವು ಕಿಡಿಗೇಡಿಗಳು ದೂಮಪಾನ, ಮಧ್ಯಪಾನ ಮಾಡಿ ಪ್ಯಾಸ್ಟಿಕ್, ಬಾಟಲಿ ತ್ಯಾಜ್ಯಗಳನ್ನು ಹಾಕಿ ತೆರಳುತ್ತಿದ್ದಾರೆ. ಪೊಲೀಸು ಇಲಾಖೆ ಕ್ರಮ ಕೈಗೊಳ್ಳವೇಕು ಎಂದು ಶಾಲೆಯ ವಿದ್ಯಾರ್ಥಿಗಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಇಲಾಖೆಯು ಬೀಟ್ ಸಿಬ್ಬಂದಿಗಳ ಮೂಲಕ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪೆರುಂಬಾಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲೆಯ ಮುಂಭಾಗದಲ್ಲಿರುವ ತ್ಯಾಜ್ಯ ವಿಲೆವಾರಿ ಘಟಕದಿಂದ ನೋಣಗಳು ಹೆಚ್ಚಾಗಿದ್ದು, ಇದರಿಂದ ರೋಗ ಹರಡುವ ಆತಂಕ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಕಸ ವಿಲೆವಾರಿ ಘಟಕವನ್ನು ಇತರೆಡೆಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಪುರಸಭೆಗೆ ಪತ್ರ ಬರೆಯಲಾಗುತ್ತದೆ ಮತ್ತು ವಸತಿ ಶಾಲೆಯ ಉನ್ನತ ಮಟ್ಟದ ಅಧಿಕಾರಿಗಳಿಂದ ಪತ್ರಕ್ಕೆ ಮುಂದಾಗಿ ಎಂದು ಸಲಹೆ ನೀಡಿದರು. ಸಭೆಯಲ್ಲಿ ಗ್ರಾಮದಲ್ಲಿ ಮಕ್ಕಳು ಎದುರಿಸುತ್ತಿರುವ ವಿವಿದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು 15 ಅರ್ಜಿಗಳು ಸಲ್ಲಿಕೆಯಾದವು.
ನಗರ ಠಾಣೆಯ ಸಹಾಯಕ ಠಾಣಾಧಿಕಾರಿ ಎಂ.ಎಂ.ಮೋಹಮ್ಮದ್, ಗ್ರಾ.ಪಂ ಸದಸ್ಯರಾದ ಕೆ.ಎನ್. ಉಪೇಂದ್ರ, ಕೆ.ಟಿ.ಭಶೀರ್, ಕೆ.ಕೆ.ಬೋಪಣ್ಣ, ಕೆ.ಬಿ.ಶಹಜೀರ್ ಆಲಿ, ಆರ್ಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅನ್ವರುಲ್ ಹುದಾ ಆಂಗ್ಲ ಮಾಧ್ಯಮ ಶಾಲೆ, ಪೆರುಂಬಾಡಿ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಶಾಲೆ, ಕಲ್ಲುಬಾಣೆ ಬದ್ರೀಯ ಪಬ್ಲಿಕ್ ಶಾಲೆ, ಪೆರುಂಬಾಡಿ ಶಂಸುಲ್ ಉಲುಮಾ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು, ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು. ಆರ್ಜಿ ಗ್ರಾ.ಪಂ ಕಾರ್ಯದರ್ಶಿ ರಾಜನ್ ಆರ್ ಸ್ವಾಗತಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ಕೆ.ಪ್ರಮೋದ್ ವಂದಿಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ