ಮಡಿಕೇರಿ ಫೆ.14 NEWS DESK : ಮೈಸೂರಿನ ಉದಯಗಿರಿಯಲ್ಲಿ ಉದ್ದೇಶ ಪೂರ್ವಕವಾಗಿ ಕೆಲವು ಕಿಡಿಗೇಡಿಗಳು ನಡೆಸಿದ ಗಲಭೆಯನ್ನು ಆರ್‍ಎಸ್‍ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು ನೀಡಿರುವ ಹೇಳಿಕೆ ಖಂಡನೀಯವೆಂದು ಕೊಡಗು ಜಿಲ್ಲಾ ಬಿಜೆಪಿಯ ಪಧಾನ ಕಾರ್ಯದರ್ಶಿ ಮಹೇಶ್ ಜೈನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸುಳ್ಳು ಆರೋಪಗಳನ್ನು ಮಾಡಿ ಸಮಾಜದ ಶಾಂತಿ ಕದಡುತ್ತಿರುವ ಎಂ.ಲಕ್ಷ್ಮಣ್ ಅವರನ್ನು ತಕ್ಷಣ ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರುಗಳ ಕುರಿತು ಕಾರ್ಟೂನ್ ರೂಪದಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿರುವುದನ್ನು ವಿರೋಧಿಸುವ ನೆಪದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ ಮಾಡಲಾಗಿದೆ. ಅಲ್ಲದೆ ಪೂರ್ವನಿಯೋಜಿತರಾಗಿ ಠಾಣೆ ಮತ್ತು ಸಾರ್ವಜನಿಕರ ಮೇಲೂ ದಾಳಿ ಮಾಡಿದ್ದಾರೆ. ಈ ಗಲಭೆಕೋರರನ್ನು ರಕ್ಷಿಸುವ ಸಲುವಾಗಿ ಲಕ್ಷ್ಮಣ್ ಅವರು ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಮೇಲೆ ಗೂಬೆ ಕೂರಿಸುತ್ತಿದ್ದು, ಇದು ಸಮಾಜದ ಶಾಂತಿ ಕದಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ. ಈ ಸುಳ್ಳು ಹೇಳಿಕೆಯ ಹಿಂದೆ ಷಡ್ಯಂತ್ರವಿದ್ದು, ಲಕ್ಷ್ಮಣ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಿದರೆ ಸತ್ಯಾಂಶ ಹೊರ ಬೀಳಲಿದೆ ಎಂದು ಅಭಿಪ್ರಾಯಪಟ್ಟಿರುವ ಮಹೇಶ್ ಜೈನಿ, ರಾಜಕೀಯ ಲಾಭಕ್ಕಾಗಿ ಬಾಯಿ ಚಪಲ ತೀರಿಸಿಕೊಳ್ಳಲು ನಿರಾಧಾರ ಹೇಳಿಕೆ ನೀಡಿರುವ ಲಕ್ಷ್ಮಣ್ ಅವರು ಸಂಘ ಪರಿವಾರದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಗಲಭೆಗಳು ನಡೆದಾಗ ಸಮಾಜದಲ್ಲಿ ಶಾಂತಿ ಮೂಡಿಸುವುದಕ್ಕೆ ಕೈ ಜೋಡಿಸಬೇಕೆ ಹೊರತು ಆಡಳಿತ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ನಾಲಿಗೆ ಹರಿಬಿಡುವ ಮೂಲಕ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು. ಇಂತಹವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.











