ಮಡಿಕೇರಿ ಫೆ.14 NEWS DESK : ಕನ್ನಡ ಸಾರಸ್ವತ ಲೋಕದಲ್ಲಿ ಸಾಹಿತ್ಯ ಕೃಷಿಯ ಮೂಲಕ ಶಾಶ್ವತ ಸ್ಥಾನ ಪಡೆದ, ಕೊಡಗಿನ ವಿಶಿಷ್ಟ ಸಂಸ್ಕೃತಿಯನ್ನು ತಮ್ಮ ಹುತ್ತರಿ ಹಾಡಿನ ಮೂಲಕ ಕಟ್ಟಿಕೊಟ್ಟ ಹಿರಿಯ ಚೇತನ ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಫೆ.20 ರಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ, 1874ರ ಫೆ.22 ರಂದು ಜನಿಸಿದ ಪಂಜೆ ಮಗೇಶರಾಯರು ತಮ್ಮ 48ನೇ ವಯಸ್ಸಿನಲ್ಲಿ ಮಡಿಕೇರಿಯ ಅಂದಿನ ಸೆಂಟ್ರಲ್ ಹೈಸ್ಕೂಲ್‍ಗೆ ಪ್ರಥಮ ಭಾರತೀಯ ಕನ್ನಡ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡು ಸುಮಾರು 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆಂದು ತಿಳಿಸಿದರು. ಪಂಜೆ ಮಂಗೇಶರಾಯರು ‘ಕವಿಶಿಷ್ಯ’ ಎನ್ನುವ ಕಾವ್ಯನಾಮದಲ್ಲಿ ಕಥೆ, ಸಣ್ಣಕಥೆ, ಶಿಶು ಸಾಹಿತ್ಯ, ಇರಿಹಾಸವನ್ನು ಆಧರಿಸಿದ ಕಥೆಗಳು, ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಇವರ 125ನೇ ವರ್ಷಾಚರಣೆಯನ್ನು ಜಿಲ್ಲಾ ಕಸಾಪದಿಂದ ಈ ಹಿಂದೆ ಅವರು ಮುಖ್ಯೋಪಾಧ್ಯಾಯರಾಗಿದ್ದ ಶಾಲೆಯಾದ ಇಂದಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು ಮತ್ತು ಅಂದಿನ ಜಿಲ್ಲಾಧಿಕಾರಿ ಜಯರಾಮರಾಜೇ ಅರಸ್ ಅವರು ಕಾರ್ಯಕ್ರಮಕ್ಕೆ ನೆರವು ನೀಡಿದ್ದರು. ಅಂದು ಹಿರಿಯ ಪತ್ರಕರ್ತರಾದ ಎಂ.ಎಸ್.ರಾಜೇಂದ್ರ ಕುಮಾರ್ ಮತ್ತು ಅನಿಲ್ ಎಚ್.ಟಿ. ಅವರ ಮುತುವರ್ಜಿಯಲ್ಲಿ ಪಂಜೆ ಮಂಗೇಶರಾಯರ ಕುರಿತ ಪುಸ್ತಕವನ್ನು ಹೊರ ತರಲಾಗಿತ್ತು. 2013 ರಲ್ಲಿ ನಡೆದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಂಜೆಯವರ ಕುರಿತ ಸಮಗ್ರ ಮಾಹಿತಿಯನ್ನೊಳಗೊಂಡ ಗ್ರಂಥವನ್ನು ಹೊರ ತರಲಾಗಿತ್ತು ಎಂದರು. ಪಂಜೆಯವರ 150ನೇ ವರ್ಷಾಚರಣೆಯನ್ನು ಜಿಲ್ಲಾ ಕಸಾಪ ಆಯೋಜಿಸುತ್ತಿದ್ದು, ಇದಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಹಕಾರವನ್ನು ನೀಡುತ್ತಿದೆ.ಫೆ.20 ರಂದು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸಾಹಿತಿ ಜಲಜಾ ಶೇಖರ್ ಅವರ “ಅಗ್ನಿಕುಂಡ” ಕಥಾ ಸಂಕಲನವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವೋಜಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರೆಸ್ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದು, ಚಿತ್ರ ಕಲಾವಿದ ಬಿ.ಆರ್.ಸತೀಶ್ ಮತ್ತು ತಂಡದಿಂದ ಕುಂಚ ಗಾಯನ ನಡೆಯಲಿದೆ ಎಂದರು.
ವಿಚಾರಗೋಷ್ಠಿ :: ಅಪರಾಹ್ನ 12.30 ಗಂಟೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಮತ್ತು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯಪ್ರಕಾಶ್ ಶೆಟ್ಟಿ.ಹೆಚ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ.ಮಂಜುಳಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಿ.ರಂಗಧಾಮಪ್ಪ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ನಿವೃತ್ತ ಸಹ ಕಾರ್ಯದರ್ಶಿ ಡಾ.ಎಸ್.ಪಿ.ಮಹಾಲಿಂಗೇಶ್ವರ “ಪಂಜೆಯವರ ಬದುಕು-ಬರಹ”, ಸಾಹಿತಿ ಹಾಗೂ ಉಡುಪಿ ಎಂ.ಜಿ.ಎಂ.ಕಾಲೇಜಿನ ಉಪನ್ಯಾಸಕರಾದ ಡಾ.ಕಾತ್ಯಾಯಿನಿ ಕುಂಜಿಬೆಟ್ಟು “ಸಂಶೋಧನಾ ನೆಲೆಯಲ್ಲಿ ಪಂಜೆ”, ಪೆರ್ಲ ನಾಲಂದ ಮಹಾವಿದ್ಯಾಲಯದ ನಿವೃತ್ತ ಪಾಂಶುಪಾಲರಾದ ಡಾ.ಕೆ.ಕಮಲಾಕ್ಷ “ಪಂಜೆಯವರ ಶಿಶು ಸಾಹಿತ್ಯ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಶಕ್ತಿ ದಿನ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ತು ಅಧ್ಯಕ್ಷ ಅನಿಲ್ ಹೆಚ್.ಟಿ.ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಂಜೆ ಅವರು ರಚಿಸಿದ ಗೀತೆಗಳಿಗೆ ಗಾಯನ ಮತ್ತು ನೃತ್ಯ ರೂಪಕ ಗಮನ ಸೆಳೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ಎಸ್.ಐ.ಮುನೀರ್ ಅಹ್ಮದ್, ಪುದಿಯನೆರವನ ರೇವತಿ ರಮೇಶ್, ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಹಾಗೂ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಪ್ರೇಮ್ ಕುಮಾರ್ ಉಪಸ್ಥಿತರಿದ್ದರು.











