![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ಮಡಿಕೇರಿ ಫೆ.14 NEWS DESK : ಅಂದು ಇಡೀ ಭಾರತಕ್ಕೇ ಕತ್ತಲು ಕವಿದಿತ್ತು. ಬೇಸರ, ದುಃಖ ಭಾರತೀಯರ ಹೃದಯದಲ್ಲಿ ಮಡುಗಟ್ಟಿತ್ತು. ಹೌದು 2019ರ ಫೆಬ್ರವರಿ ತಿಂಗಳ 14 ರಂದು ಬೆಚ್ಚಿಬೀಳಿಸುವ ಸುದ್ದಿಯೊಂದು ಗಾಳಿಗಿಂತ ವೇಗವಾಗಿ ಹರಡಿತ್ತು. ಮಧ್ಯಾಹ್ನ ಎಲ್ಲರೂ ಕೆಲಸ ಕಾರ್ಯಗಳಲ್ಲಿ ತೊಡಗಿರುವ ವೇಳೆಯಲ್ಲಿ ಭಾರತೀಯ ಯೋಧರಿದ್ದ ಬಸ್ಸನ್ನು ಟಾರ್ಗೆಟ್ ಮಾಡಿ ಕುಳಿತಿದ್ದ ಪಾಪಿಸ್ತಾನಿ ಭಯೋತ್ಪಾದಕರು ಅವರ ಗುರಿಯನ್ನು ಯಶಸ್ವಿಯಾಗಿ ತಲುಪಿದ್ದರು. ಯಾವುದು ಸಂಭವಿಸಬಾರದಾಗಿತ್ತೋ ಅಂತಹ ಒಂದು ದುರ್ಘಟನೆ ಸಂಭವಿಸಿಯಾಗಿತ್ತು. ೪೦ ಮಂದಿ ದೇಶವನ್ನು ರಕ್ಷಿಸುವ ಹೊಣೆಹೊತ್ತವರು ಏನನ್ನೂ ಅರಿಯದೆ ವೀರಮರಣವನ್ನಪ್ಪಿದ್ದರು. ಇದೆಲ್ಲ ನಡೆದು ವರ್ಷಗಳು ಸಂದರೂ ಆ ಕಹಿನೆನಪು ಮನಸ್ಸಿನಿಂದ ಮರೆಯಾಗುವುದಿಲ್ಲ. ಸೇನೆ, ಸೇವೆ ಎಂದಾಗ ಪದೇ ಪದೇ ನೆನಪಾಗುತ್ತಲೇ ಇರುತ್ತದೆ. ತಾಯಿ ಭಾರತಿಯ ಮಡಿಲಲ್ಲಿ ಮಲಗಿರುವ ಆ ನಲವತ್ತು ಮಂದಿಗೆ ಅದು ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂದು ತಿಳಿಯುತ್ತಿಲ್ಲ. ಭಾರತದ ನೆಲದ ರಕ್ಷಣೆಗೆಂದು ತಮ್ಮ ಜೀವವನ್ನೇ ಮುಡಿಪಾಗಿಟ್ಟವರ ಚಿತ್ರಣ ಕಣ್ಣೆದುರು ಮಿಂಚಿ ಮರೆಯಾಗುತ್ತಲೇ ಇರುತ್ತದೆ. ಹುತಾತ್ಮರಾದ ಅಷ್ಟೂ ವೀರರಿಗೆ ಕಂಬನಿಯ ಪ್ರಣಾಮಗಳು.
ಘಟನೆಯ ಹಿನ್ನಲೆ : ಏನಾಯಿತು ಅಂದು ?
2019 ರ ಫೆಬ್ರವರಿ 14. ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕಿಂತ ಹೆಚ್ಚು ಮಂದಿ ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸಿನ (ಸಿಆರ್ ಪಿಎಫ್) ಸಿಬ್ಬಂದಿಗಳು ೭೮ ವಾಹನಗಳಲ್ಲಿ ಪ್ರಯಾಣಿಸುತಿದ್ದರು. ಮಧ್ಯಾಹ್ನ ಸರಿಸುಮಾರು 3:15ಕ್ಕೆ ಅವಾಂತಿಪುರ ಬಳಿಯ ಲೆತ್ಪೊರದಲ್ಲಿ ಭದ್ರತಾ ಸಿಬ್ಬಂದಿಯನ್ನು ಸಾಗಿಸುತಿದ್ದ ಬಸ್ಸಿಗೆ ಮಾರುತಿ ಇಕೋ ಕಾರೊಂದು 300 ಕೆಜಿಗೂ ಹೆಚ್ಚು ಸ್ಫೋಟಕಗಳು, ಅಂದರೆ ೮೦ಕೆಜಿಗೂ ಹೆಚ್ಚು ಆರ್‌ಡಿಎಕ್ಸ್ ಮತ್ತು ಅಮೋನಿಯಂ ನೈಟ್ರೇಟನ್ನು ಹೊತ್ತು ಗುದ್ದಿತ್ತು. ಈ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡು 76 ಬೆಟಾಲಿಯನ್‌ನ ೪೦ ಮೀಸಲು ಪಡೆಯ ಯೋಧರು ಹುತಾತ್ಮರಾಗಿದ್ದರು. ಅನೇಕರು ತೀವ್ರವಾಗಿ ಗಾಯಗೊಂಡಿದ್ದರು. ನಡೆದ ಸ್ಫೋಟ ಅದೆಷ್ಟು ಭೀಕರವಾಗಿತ್ತೆಂದರೆ ಸೈನಿಕರ ದೇಹಗಳು ಛಿದ್ರವಾಗಿದ್ದವು. ಬಸ್ ಲೋಹದ ಮುದ್ದೆಯಾಗಿತ್ತು. ದಾಳಿಯ ನಂತರ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತು. ನಂತರ ಆತ್ಮಾಹುತಿ ದಾಳಿಯನ್ನು ನಡೆಸಿದ ಆಕ್ರಮಣಕಾರ ೨೨ ವರ್ಷದ ಆದಿಲ್ ಅಹ್ಮದ್‌ನ ವೀಡಿಯೊವನ್ನೂ ಜೈಷ್-ಎ- ಮೊಹಮ್ಮದ್ ಸಂಘಟನೆ ಬಿಡುಗಡೆ ಮಾಡಿತ್ತು. ಭಾರತೀಯರೆಲ್ಲರು ಈ ಘಟನೆಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ವಿಶ್ವದ ಅನೇಕ ರಾಷ್ಟ್ರಗಳು ಉಗ್ರರ ಈ ಹೇಯ ಕೃತ್ಯವನ್ನು ಅತ್ಯುಗ್ರವಾಗಿ ಖಂಡಿಸಿ ಭಾರತಕ್ಕೆ ನೈತಿಕ ಬೆಂಬಲವನ್ನೂ ಸೂಚಿಸಿದ್ದರು. ಬಹಳ ವರ್ಷಗಳಿಂದ ಉಗ್ರಗಾಮಿಗಳ ಚಟುವಟಿಕೆಯನ್ನು ವಿರೋಧಿಸುತ್ತಲೇ ಬಂದಿರುವ ಭಾರತವನ್ನು ಪಾಕಿಸ್ತಾನಿ ಉಗ್ರರು ಬೇಕಂತಲೇ ಟಾರ್ಗೇಟ್ ಮಾಡಿದ್ದರೆನಿಸುತ್ತದೆ.
ನಮ್ಮ ಸೈನಿಕ ವೀರರು ಅಮರರಾದರು :: 1989 ರ ನಂತರ ರಾಜ್ಯ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ಭೀಕರ ಮಾರಣಾಂತಿಕ ಭಯೋತ್ಪಾದಕ ದಾಳಿ ಇದಾಗಿದ್ದು.18ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕದ ಮಂಡ್ಯದ ಗುಡಿಗೆರೆಯ ಯೋಧ ಹೆಚ್ ಗುರು ಸೇರಿದಂತೆ ಜೈಮಾಲ್ ಸಿಂಗ್, ನಾಸೀರ್ ಅಹ್ಮದ್, ಸುಖ್ವಿಂದರ್ ಸಿಂಗ್, ರೋಹಿತಾಶ್ ಲಾಂಬಾ, ತಿಲಕ್ ರಾಜ್, ಭಾಗೀರತ್ ಸಿಂಗ್, ಬಿರೇಂದ್ರ ಸಿಂಗ್, ಅವ್ದೇಶ್ ಕುಮಾರ್ ಯಾದವ್, ನಿತಿನ್ ಸಿಂಗ್ ರಾಥೋರ್, ರತನ್ ಕುಮಾರ್ ಠಾಕೂರ್, ಸುರೇಂದ್ರ ಯಾದವ್, ಸಂಜಯ್ ಕುಮಾರ್ ಸಿಂಗ್, ರಾಮ್ವಕೀಲ್, ಧರಮ್ಚಂದ್ರ, ಬೆಲ್ಕರ್ ಥಾಕಾ, ಶ್ಯಾಮ್ ಬಾಬು, ಅಜಿತಹ ಕುಮಾರ್, ಪ್ರದೀಪ್ ಸಿಂಗ್, ಸಂಜಯ್ ರಜಪೂತ್, ಕೌಶಲ್ ಕುಮರ್ ರಾವತ್, ಜೀತ್ ರಾಮ್, ಅಮಿತ್ ಕುಮರ್, ಕುಮಾರ್ ಮೋರ್ಯಾ, ಕುಲ್ವಿಂದರ್ ಸಿಂಗ್, ವಿಜಯ್, ವಸಂತ್ ಕುಮಾರ್, ಶುಭಂ ಅನಿರಂಗ್, ಅಮರ್ ಕುಮಾರ್, ಅಜಯ್ ಕುಮಾರ್, ಮನಿಂದರ್ ಸಿಂಗ್, ರಮೆಸಹ ಯಾದವ್, ಪರ್ಶನ ಕುಮಾರ್, ಹೇಮ್ ರಾಜ್, ಅಶ್ವಿನ್ ಕುಮಾರ್, ಪ್ರದೀಪ್ ಕುಮಾರ್, ಸುಧೀರ್ ಕುಮಾರ್, ರವಿಂದರ್ ಸಿಂಗ್, ಬಸುಮತಾರಿ, ಮಹೇಶ್ ಕುಮಾರ್ ಹಾಗು ಗುರುರಾಜ್
ಕೂಡ ಈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದರು.
ದಾಳಿಯ ಮಾಸ್ಟರ್ ಮೈಂಡ್ ಯಾರು ?
ದಾಳಿಯ ಪ್ರಮುಖ ಸಂಚುಕೋರ ಉಮರ್ ಫಾರೂಕ್ 2018ರ ಏಪ್ರಿಲ್‌ನಲ್ಲಿ ಪಾಕಿಸ್ತಾನದಿಂದ ಭಾರತವನ್ನು ಪ್ರವೇಶ ಮಾಡಿದ್ದ. ದಾಳಿಗೆ ಬೇಕಾದ ಐಇಡಿ ಸ್ಫೋಟಕಗಳನ್ನ ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದು ಈತನೇ. 2020ರ ಮಾರ್ಚ್ 29ರಂದು ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಈತ ಹಾಗೂ ಮತ್ತೊಬ್ಬ ಐಇಡಿ ತಜ್ಞ ಕಮ್ರಾನ್ ಹತ್ಯೆಯಾಗಿದ್ದರು. ಆಗ ಫಾರೂಖ್‌ನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದ ಭದ್ರತಾ ಪಡೆಗಳು ಫೋನ್‌ನಲ್ಲಿರುವ ವಾಟ್ಸಾಪ್ ಸಂದೇಶಗಳಿಂದ ಘಟನೆಯ ಕುರಿತಾಗಿ ಹೆಚ್ಚಿನ ಮಾಹಿತಿ ಕಲೆಹಾಕಿದ್ದರು. ಪಾಕಿಸ್ತಾನದಲ್ಲಿ ಜೈಷ್ ಸಂಘಟನೆಯ ನಿರ್ವಾಹಕರಿಗೆ ಈತ ತಾನು ಸ್ಫೋಟಕಗಳೊಂದಿಗೆ ಭಾರತಕ್ಕೆ ಸುರಕ್ಷಿತವಾಗಿ ಬಂದಿದ್ದಾಗಿ ವಾಟ್ಸಾಪ್ನಲ್ಲಿ ಮೆಸೇಜ್ ಕಳುಹಿಸಿದ್ದು, ಈತನ ಮೊಬೈಲ್‌ನಲ್ಲಿ ಉಗ್ರಗಾಮಿಗಳು ಕಗ್ಗತ್ತಲೆಯ ವೇಳೆಯಲ್ಲಿ ಗಡಿಯ ಮುಳ್ಳುತಂತಿಯನ್ನು ಕತ್ತರಿಸಿ ಹೇಗೆ ಗಡಿದಾಟಿ ಬರುತ್ತಾರೆಂಬ ದೃಶ್ಯವೂ ಲಭ್ಯವಾಗಿತ್ತು. ಈ ಸಂಚಿನಲ್ಲಿ ಭಾಗಿಯಾಗಿದ್ದ ಮತ್ತೋರ್ವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿ ಸೈಫುಲ್ಲಾ. ಈ ದಾಳಿ ನಡೆಸಲು ಸೈಫುಲ್ಲಾ ಐಇಡಿಯನ್ನು ತಯಾರಿಸಿಕೊಟ್ಟಿದ್ದ. ಸೈಫುಲ್ಲಾ ಪುಲ್ವಾಮಾ ಸೇರಿದಂತೆ ಹಲವಾರು ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿದ್ದು ಈತ ಪಾಕಿಸ್ತಾನದ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಸ್ಥಾಪಕನಾದ ಮೌಲಾನಾ, ರೌಫ್ ಅಝರ್ ಹಾಗೂ ಅಮ್ಮಾರ್ ಜತೆ ನಿಕಟವಾದ ಸಂಪರ್ಕವನ್ನು ಹೊಂದಿದ್ದ. ಈ ಸ್ಫೋಟಕ್ಕೆ ನೆರವು ನೀಡಿದ್ದ ಮಹಮ್ಮದ್ ಇಸ್ಮಾಲ್ ಅಲ್ವಿ ಅಲಿಯಾಸ್ ಲಂಬೂ ಅಲಿಯಾಸ್ ಅದ್ನಾನ್ ನನ್ನು ಭದ್ರತಾ ಪಡೆಗಳು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದು. ದಾಳಿಯ ಕುರಿತು ತನಿಖೆ ನಡೆಸಿದ್ದ ಎನ್‌ಐಎ ಸಲ್ಲಿಸಿದ್ದ ಆರೋಪಪಟ್ಟಿಯಲ್ಲೂ ಅದ್ನಾನ್ ಹೆಸರಿತ್ತು
ಇನ್ನುಳಿದಂತೆ ಬಂಧಿತರಾದವರಲ್ಲಿ ಒಬ್ಬ 19 ವರ್ಷದ ವೈಜ್-ಉಲ್-ಇಸ್ಲಾಂ ಹಾಗು ಮತ್ತೊಬ್ಬ 32 ವರ್ಷದ ಮೊಹಮ್ಮದ್ ಅಬ್ಬಾಸ್ ರಾಥರ್. ಇವರಿಬ್ಬರು ಶ್ರೀನಗರ ಮತ್ತು ಪುಲ್ವಾಮಾ ಮೂಲದವರು. ಇವರು ಬಾಂಬ್ ತಯಾರಿಸಲು ಆನ್‌ಲೈನ್‌ನಲ್ಲಿ ಸ್ಫೋಟಕವನ್ನು ಖರೀದಿ ಮಾಡಿ ದಾಳಿಕೋರರಿಗೆ ಸಹಕರಿಸಿದ್ದರು. ಎನ್‌ಐಎ ಕೋರಿಕೆಯ ಮೇರೆಗೆ ಅಮೆಜಾನ್ ತನ್ನ ಇ-ಕಾಮರ್ಸ್ ವೆಬ್ಸೈಟ್ ನಿಂದ ಆರೋಪಿಗಳ ಖರೀದಿ ಮಾಹಿತಿಯನ್ನು ತನಿಖಾ ತಂಡಕ್ಕೆ ನೀಡಿತ್ತು. ಇದರಲ್ಲಿ ಸ್ಫೋಟಕ ಖರೀದಿ ಮಾಡಿದ್ದು ದೃಢಪಟ್ಟಿದೆ. ಅಮೇಜಾನ್ ಒದಗಿಸಿದ ವಿವರಗಳ ಆಧಾರದ ಮೇಲೆ, ವೈಜ್-ಉಲ್-ಇಸ್ಲಾಂನನ್ನು ಬಂಧಿಸಿದಾಗ ವಿಚಾರಣೆಯ ಸಮಯದಲ್ಲಿ, ಅಮೆಜಾನ್ನಲ್ಲಿನ ತನ್ನ ಖಾತೆಯನ್ನು ಜೈಶೇ-ಇ-ಮೊಹಮ್ಮದ್ ನಿರ್ದೇಶನದ ಮೇರೆಗೆ ರಾಸಾಯನಿಕಗಳು, ಬ್ಯಾಟರಿಗಳು ಮತ್ತು ಇತರ ಸಂಬಂಧಿತ ಪರಿಕರಗಳನ್ನು ಖರೀದಿಸಲು ಬಳಸಿದ್ದಾಗಿ ಇಸ್ಲಾಂ ಬಹಿರಂಗಪಡಿಸಿದ್ದನು.. ಅಗತ್ಯವಾದ ಖರೀದಿಯ ನಂತರ ಜೈಶೇ ಭಯೋತ್ಪಾದಕರಿಗೆ ವೈಯಕ್ತಿಕವಾಗಿ ವಸ್ತುವನ್ನು ತಲುಪಿಸಿದ್ದೇನೆ ಎಂಬುದನ್ನೂ ಈತ ತನಿಖಾ ತಂಡದೊಡನೆ ಹೇಳಿಕೊಂಡಿದ್ದ.
ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ಅಡ್ಡಗಾಲಾದ ಚೀನಾ ಈ ನಡುವೆ ಕಾಶ್ಮೀರ ಕಣಿವೆಯಲ್ಲಿ ಆಪರೇಷನ್ ಆಲ್‌ಔಟ್ ಕಾರ್ಯಾಚರಣೆ ತೀವ್ರಗೊಳಿಸಿದ ಭಾರತೀಯ ಸೇನೆ ಪುಲ್ವಾಮಾ ದಾಳಿ ಸಂಚುಕೋರ ಮುದಾಸಿರ್ ಸೇರಿದಂತೆ ಕೆಲವು ಜೈಷ್ ಉಗ್ರರನ್ನು ಸದೆ ಬಡಿಯಿತು. ಪುಲ್ಮಾಮಾ ದಾಳಿಯ ಸೂತ್ರಧಾರನಾದ ಜೈಷ್-ಇ-ಮೊಹಮದ್ ಉಗ್ರಗಾಮಿ ಸಂಘಟನೆ ನಾಯಕ ಮಸೂದ್ ಅಜರ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂಬ ಪಟ್ಟಿಗೆ ಸೇರಿಸಬೇಕೆಂದು ಭಾರತ, ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ನಾಲ್ಕನೇ ಬಾರಿ ನಡೆಸಿದ ಯತ್ನ ಮತ್ತೊಮ್ಮೆ ವಿಫಲವಾಗಿದ್ದು ದುರದೃಷ್ಟ. ಪುಲ್ವಾಮಾ ದಾಳಿಗೆ ಸರಿಯಾಗಿ ಒಂದು ತಿಂಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಜರ್‌ನನ್ನು ಜಾಗತಿಕ ಭಯೋತ್ಪಾದಕನನ್ನಾಗಿ ಘೋಷಿಸುತ್ತದೆ ಎಂದು ಅಪಾರ ನಿರೀಕ್ಷೆ ಹೊಂದಿದ್ದ ಭಾರತೀಯರಿಗೆ ಚೀನಾ ಮತ್ತೊಮ್ಮೆ ಅಡ್ಡಗಾಲಾಗಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.
ಬಾಲಕೋಟ್ ಮೇಲೆ ಭಾರತದಿಂದ ಯಶಸ್ವಿ ದಾಳಿ :: ಪುಲ್ವಾಮಾ ದಾಳಿ ನಡೆದ ೧೨ನೇ ದಿನಕ್ಕೆ ಪಾಕ್‌ಗೆ ತಕ್ಕ ಉತ್ತರ ನೀಡಲು ನಿರ್ಧರಿಸಿದ ಭಾರತ ನಸುಕಿನ ಜಾವ, ಬಾಲಾಕೋಟ್ನಲ್ಲಿದ್ದ ಜೈಷ್ ಉಗ್ರರ ತರಬೇತಿ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು ೮೫ ಕಿ.ಮೀ. ಒಳನುಗ್ಗಿದ್ದ 12 ಮಿರಾಜ್-2000 ಯುದ್ಧ ವಿಮಾನಗಳು ಜೈಷ್‌ನ ತರಬೇತಿ ಕೇಂದ್ರಗಳ ಮೇಲೆ ಅತ್ಯಾಧುನಿಕ ಬಾಂಬ್ಗಳನ್ನು ಹಾಕಿ ಸಂಪೂರ್ಣ ನಾಶ ಮಾಡಿದ್ದವು. ನಸುಕಿನ ಜಾವ ೩.೩೦ರಿಂದ ೩.೫೫ರ ಅವಧಿಯಲ್ಲಿ ನಡೆದ ಈ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹೊಡೆದು ಹಾಕಲಾಗಿತ್ತು.
ಬಾಲಾಕೋಟ್ ದಾಳಿಗೆ ರೊಚ್ಚಿಗೆದ್ದ ಪಾಕ್ : ಎಫ್-16 ಅನ್ನು ಅಟ್ಟಾಡಿಸಿ ಓಡಿಸಿದ ಅಭಿನಂದನ್ ವರ್ಧಮಾನ್
ಬಾಲಾಕೋಟ್ ದಾಳಿಯಿಂದ ರೊಚ್ಚಿಗೆದ್ದಿದ್ದ ಪಾಕಿಸ್ತಾನ, ಬಾಲಕೋಟ್ ದಾಳಿಗೆ ಪ್ರತಿಯಾಗಿ ತನ್ನ ಮೂರು ಎಫ್-16 ಯುದ್ಧ ವಿಮಾನಗಳ ಮೂಲಕ ಭಾರತ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಪಾಕ್‌ನ ವಿಮಾನಗಳು ಭಾರತ ಗಡಿದಾಟಿ ಒಳಗೆ ಬಂದಿದ್ದವು. ತಕ್ಷಣ ಭಾರತದ ಕಡೆಯಿಂದ ಮಿಗ್-೨೧ ವಿಮಾನಗಳು ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸಲು ಮುಗಿಬಿದ್ದವು. ಈ ವೇಳೆ ಮಿಗ್-21 ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್‌ನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರ ವಿಮಾನ ಅಪಘಾಕ್ಕೀಡಾಗಿ ಪಾಕ್ ಸೇನೆ ಅವರನ್ನು ವಶಕ್ಕೆ ಪಡೆದಿತ್ತು. ಆನಂತರ ಭಾರತ ಹಾಗೂ ಜಾಗತಿಕ ಮಟ್ಟದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಂಸತ್ನಲ್ಲಿ ಅಭಿನಂದನ್ರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿ ಮೂರು ದಿನಗಳ ಬಳಿಕ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಅಮೃತ್‌ಸರ ಬಳಿಯ ವಾಘಾ ಗಡಿ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
ಪುಲ್ವಾಮ ದಾಳಿ ಪ್ರಕರಣ : ಎನ್‌ಐಎಯಿಂದ 5,000 ಪುಟಗಳ ಚಾರ್ಜ್‌ಶೀಟ್
ಬರೋಬ್ಬರಿ 18 ತಿಂಗಳ ಕಾಲ ತೀವ್ರವಾಗಿ ತನಿಖೆ ನಡೆಸಿ ವೈಜ್ಞಾನಿಕ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನ ಆಧರಿಸಿ ಈ ಪ್ರಕರಣಕ್ಕೆ ಒಂದು ರೂಪ ಕೊಟ್ಟಿರುವ ಎನ್‌ಐಎ ಜಮ್ಮುವಿನ ವಿಶೇಷ ಕೋರ್ಟ್‌ನಲ್ಲಿ ಚಾರ್ಜ್‌ಶೀಟ್ ಫೈಲ್ ಮಾಡಿದ್ದು ಪಾಕ್ ಮೂಲದ ಜೆಇಎಂ ಸಂಘಟನೆಯ ಮೌಲಾನ ಮಸೂದ್ ಅಜರ್, ರೌಫ್ ಅಜ್ಗರ್ ಸೇರಿದಂತೆ 20 ಉಗ್ರರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದು, ಪ್ರಮುಖ ಸಂಚುಕೋರ ಫಾರೂಕ್‌ನ ಮೊಬೈಲಿನಿಂದ ಕಾಲ್ ರೆಕಾರ್ಡಿಂಗ್, ವಾಟ್ಸಾಪ್ ಚಾಟ್, ಫೋಟೋ, ವಿಡಿಯೋ ಇತ್ಯಾದಿಗಳನ್ನು ಸಾಕ್ಷಿಯಾಗಿ ಇಟ್ಟುಕೊಳ್ಳಲಾಗಿದೆ. ಫೆಬ್ರವರಿ 14 ನ್ನು ಈಗ ಭಾರತೀಯರು ವೀರ ಮರಣವನ್ನು ಹೊಂದಿದ ಸೈನಿಕ ಸಹೋದರರಿಗೆ ಎಂದು ಮೀಸಲಾಗಿಡುತ್ತಿದ್ದು, ಈ ದಿನದಲ್ಲಿ ಭಾರತದೆಲ್ಲೆಡೆ ಹುತಾತ್ಮರಾದ ಅಷ್ಟೂ ಸೈನಿಕರನ್ನು ಸ್ಮರಿಸುತ್ತಿದ್ದು, ಪ್ರತಿಯೊಬ್ಬ ನಾಗರೀಕರೂ ಗೌರವ ನೀಡುವುದನ್ನು ಕಾಣಬಹುದು.
ಪುಲ್ವಾಮ ದಾಳಿಗೂ ಮುಂಚೆ ನಡೆದ ದಾಳಿಗಳು ::
೨೦೧೫ರ ಆರಂಭದಲ್ಲಿ, ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಹೆಚ್ಚು ಆತ್ಮಹುತಿ ದಾಳಿ ನಡೆಸಿದ್ದರು.
ಜುಲೈ ೨೦೧೫ ರಲ್ಲಿ, ಗುರದಾಸ್ಪುರದಲ್ಲಿ ಬಸ್ ಮತ್ತು ಪೊಲೀಸ್ ಠಾಣೆಗೆ ಮೂರು ಬಂದೂಕುದಾರಿಗಳು ದಾಳಿ ಮಾಡಿದ್ದರು.
೨೦೧೬ರ ಆರಂಭದಲ್ಲಿ ನಾಲ್ಕರಿಂದ ಆರು ಬಂದೂಕುದಾರಿಗಳು ಪಠಾನ್‌ಕೋಟ್ ಏರ್‌ಫೋರ್ಸ್ ಸ್ಟೇಷನ್ ಅನ್ನು ಆಕ್ರಮಣ ಮಾಡಿದ್ದರು.
ಫೆಬ್ರವರಿ ಮತ್ತು ಜೂನ್ ೨೦೧೬ ರಲ್ಲಿ, ಉಗ್ರಗಾಮಿಗಳು ಕ್ರಮವಾಗಿ ೯ ಮತ್ತು ೮ ಭದ್ರತಾ ಸಿಬ್ಬಂದಿಗಳನ್ನು ಪಾಂಪೋರ್ನಲ್ಲಿ ಕೊಂದಿದ್ದರು.
ಸೆಪ್ಟೆಂಬರ್ ೨೦೧೬ ರಲ್ಲಿ, ನಾಲ್ಕು ಆಕ್ರಮಣಕಾರರು ಉರಿಯಲ್ಲಿ ಭಾರತೀಯ ಸೈನ್ಯದ ಬ್ರಿಗೇಡ್ ಪ್ರಧಾನ ಕಾರ್ಯಾಲಯದಲ್ಲಿ ೧೯ ಸೈನಿಕರನ್ನು ಕೊಂದರು.
೩೧ ಡಿಸೆಂಬರ್ ೨೦೧೭ ರಂದು, ಲೆಥ್ಪಾರದಲ್ಲಿನ ಕಮಾಂಡೋ ತರಬೇತಿ ಕೇಂದ್ರದಲ್ಲಿ ಉಗ್ರಗಾಮಿಗಳು ಐದು ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ.
ಈ ಎಲ್ಲಾ ದಾಳಿಯು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿಯೇ ನಡೆಸಲಾಗಿತ್ತು. ಹೀಗೆ ಭಾರತದ ಮೇಲೆ ನಡೆದ ಪ್ರತಿ ದಾಳಿಗೂ ಉತ್ತರವಾಗಿ ನಮ್ಮ ಸೈನಿಕರು ಎದೆಯೊಡ್ಡಿದ್ದು , ಭಾರತ ಮಾತೆಯ ಸಿಂಧೂರವಾಗಿ ಸದಾ ಮುಂದಿದ್ದು, ತಾಯ್ನಾಡಿನ ರಕ್ಷಣೆ ಮಾಡಿ ನಮ್ಮನ್ನು ಕಾದಿರುವರು. ಹಾಗಾಗಿ ನಾಳೆ ಫೆಬ್ರವರಿ 14 ದೇಶ ಪ್ರೇಮಿಗಳ ದಿನವಾಗಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರ ಬಲಿದಾನಕ್ಕೆ ಗೌರವ ಸೂಚಿಸುವ ಸಲುವಾಗಿ ಹುತಾತ್ಮ ಯೋಧರಿಗೆ ಗೌರವಾರ್ಪಣೆ ಮಾಡೋಣ. ನಮ್ಮ ರಕ್ಷಣೆಗಾಗಿ ತಮ್ಮ ಜೀವವನ್ನು ತ್ಯಾಗ ಮಾಡಿದ ರೀಯಲ್ ಹೀರೋಗಳಿಗಾಗಿ ಅಷ್ಟು ಮಾಡಲು ಸಾಧ್ಯವಿದೆ ಎನಿಸುತ್ತದೆ. ನಮ್ಮ ನೆಮ್ಮದಿಯ ನಾಳೆಗಾಗಿ ತಮ್ಮ ಪ್ರಾಣಾರ್ಪಣೆಗೈದ ವೀರ ಯೋಧರಿಗೆ ಮತ್ತೊಮ್ಮೆ ನಮನಗಳು.
ಫೆ. 14ನ್ನು ನೀವು ಹೇಗೆ ನಮ್ಮ ಸೈನಿಕರಿಗಾಗಿ ಮುಡಿಪಾಗಿಟ್ಟಿರುವಿರಿ ಎನ್ನುವುದನ್ನು ನನಗೂ ಕಳುಹಿಸಿಕೊಡಿ. ನಿಮ್ಮ ಹೆಸರು ಹಾಗು ವಿಳಾಸದೊಡನೆ. 8762632314
ಬರಹ :ಚಂದನ್ ನಂದರಬೆಟ್ಟು
8762632314