![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ಮಡಿಕೇರಿ ಫೆ.14 NEWS DESK : ವೈದ್ಯಕೀಯ ವ್ಯಾಸಂಗ ಮಾಡಿರುವ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಮೂಲತಃ ವಿಜ್ಞಾನದ ವಿದ್ಯಾರ್ಥಿಯೇ ಆಗಿದ್ದಾರೆ. ಇವರಿಂದು ಕೆಲ ಕಾಲ ತಮ್ಮೆಲ್ಲ ಕೆಲಸ ಕಾರ್ಯಗಳ ಜಂಜಡ ಮರೆತು ಶಿಕ್ಷಕರಾಗಿ ವಿಜ್ಞಾನ ವಿಷಯವನ್ನು ಮಕ್ಕಳಿಗೆ ಬೋಧಿಸಿದ ಕುತೂಹಲಕಾರಿ ವಿದ್ಯಮಾನ ಸೋಮವಾರಪೇಟೆಯಲ್ಲಿ ನಡೆಯಿತು. ಸೋಮವಾರಪೇಟೆಯ ಸಮಾಜ ಕಲ್ಯಾಣ ಇಲಾಖೆ ಅಧೀನದ ಬಾಲಕರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಕಲಿಕೆಯಲ್ಲಿ ನಿರತರಾಗಿದ್ದ ಮಕ್ಕಳನ್ನು ಗಮನಿಸಿದರು. ಮಕ್ಕಳ ಓದಿನ ಬಗ್ಗೆ ಕುತೂಹಲಿಗಳಾದ ಶಾಸಕರು ಕೆಲ ಕಾಲ ತಾವೇ ಪುಸ್ತಕ ಹಿಡಿದು ಮಕ್ಕಳಿಗೆ ವಿಜ್ಞಾನ ಪಾಠ ಮಾಡುವ ಮೂಲಕ ಅಚ್ಚರಿ ಮೂಡಿಸಿದರು. ಪಾಠ ಮಾಡಿದ್ದಷ್ಟೆ ಅಲ್ಲ, ಮಕ್ಕಳಿಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದ್ದು ವಿಶೇಷ. ಶಾಸಕರಾದ ಡಾ. ಮಂತರ್ ಗೌಡ, ಮಕ್ಕಳೊಂದಿಗೆ ಬೆರೆತು, ಕೆಲ ಕಾಲ ತಾವೊಬ್ಬ ಉತ್ತಮ ಶಿಕ್ಷಕರೂ ಹೌದೆಂಬುದನ್ನು ಸಾಬೀತು ಪಡಿಸಿದ್ದು ವಿಶೇಷ. ಈ ಸಂದರ್ಭ ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದ ಶಾಸಕರು, ಮಕ್ಕಳಿಗೆ ‘ಚೆನ್ನಾಗಿ ಓದುತ್ತೀರಲ್ವಾ ಮಕ್ಕಳೇ’ ಎಂದು ವಿದ್ಯಾರ್ಥಿಗಳೆಡೆಗಿನ ಶಿಕ್ಷಕರ ಕಾಳಜಿ ಪ್ರೀತಿಯನ್ನು ತೋರಿ ಮಕ್ಕಳ ಪ್ರೀತಿ ಮತ್ತು ಅಭಿಮಾನಕ್ಕೆ ಕಾರಣರಾದರು.