![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ಮಡಿಕೇರಿ ಫೆ.14 NEWS DESK : ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಮಡಿಕೇರಿ ತಾಲ್ಲೂಕಿನ ಮೂರು ಸಾಮಾನ್ಯ ಹಾಗೂ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕಾಗಿ ಫೆ.16 ರಂದು ಚುನಾವಣೆ ನಡೆಯಲಿದೆ. ಸುಮಾರು 9 ಸಾವಿರಕ್ಕಿಂತಲೂ ಅಧಿಕ ಸದಸ್ಯರಿರುವ ಈ ಸಂಘದಲ್ಲಿ ಮತ ಚಲಾಯಿಸಲು ಕೇವಲ 487 ಮಂದಿಗೆ ಮಾತ್ರ ಅವಕಾಶ ಲಭಿಸಿರುವುದು ಹಾಸ್ಯಾಸ್ಪದ ಮತ್ತು ಸಂಘದ ಹಿನ್ನಡೆಗೆ ಸಾಕ್ಷಿಯಾಗಿದೆ ಎಂದು ಕೊಡಗು ಏಲಕ್ಕೆ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾಜಿ ನಿರ್ದೇಶಕ ಕಿಮ್ಮುಡಿರ ಜಗದೀಶ್ ಆರೋಪಿಸಿದ್ದಾರೆ. ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಂಘದ ಹಾಲಿ ಆಡಳಿತ ಮಂಡಳಿಯವರ ನಿಷ್ಕ್ರಿಯ ಆಡಳಿತವೇ ಈ ಸಂಘದ ಹಿನ್ನಡೆಗೆ ಕಾರಣವಾಗಿದೆ. ಸದಸ್ಯರು ಮತದಾನದಿಂದ ವಂಚಿತರಾಗಿರುವುದರಿಂದಲೇ 11 ಸ್ಥಾನಗಳನ್ನು ಅವಿರೋಧವಾಗಿ ಗೆಲ್ಲಲು ಸಾಧ್ಯವಾಗಿದೆ. ಕೊಡಗು ಕಾಫಿ ನಾಡಾಗಿದ್ದರೂ ಕಳೆದ ಹಲವು ವರ್ಷಗಳಿಂದ ಕಾಫಿ ಖರೀದಿಯ ವ್ಯವಹಾರ ನಿಲ್ಲಿಸಲಾಗಿದೆ. ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ಸಂಘ ವಿಫಲವಾಗಿದೆ. ಪಾಲು ಹಣವನ್ನು ಭರ್ತಿ ಮಾಡಿಕೊಳ್ಳಲು ಸೂಕ್ತ ಕಾಲದಲ್ಲಿ ಪತ್ರ ವ್ಯವಹಾರ ನಡೆಸಬೇಕು. ಆದರೆ ಇದು ಸಂಘದಿಂದ ಆಗಿಲ್ಲ ಎಂದು ಟೀಕಿಸಿದ್ದಾರೆ.
ಹೆಬ್ಬಾಲೆ ಮತ್ತು ಕುಶಾಲನಗರದಲ್ಲಿ ಸಂಘಕ್ಕೆ ಸೇರಿದ ಬೆಲೆ ಬಾಳುವ ಆಸ್ತಿ-ಕಟ್ಟಡಗಳು ಇವೆ. ಆದರೂ ಸುಮಾರು 13 ಕೋಟಿ ರೂ. ಸಾಲದಲ್ಲಿ ಸಂಘ ತೊಳಲಾಡುತ್ತಿದೆ. ಆಡಳಿತ ವೆಚ್ಚವನ್ನು ಕಡಿಮೆ ಮಾಡಲು ಆಡಳಿತ ಮಂಡಳಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ನಾವಿಬ್ಬರು ಸಂಘದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ 221 ಅರ್ಹ ಸದಸ್ಯರು ಮಾತ್ರ ಇದ್ದಾರೆ. ಹಾಲಿ ಆಡಳಿತ ಮಂಡಳಿಯ ವೈಫಲ್ಯಗಳ ಕುರಿತು ಚಿಂತಿಸಿ ಫೆ.16ರಂದು ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ. ನಾವಿಬ್ಬರೂ ಗೆಲ್ಲುವ ಅಚಲ ವಿಶ್ವಾಸ ನಮಗಿದೆ, ಗೆದ್ದರೆ ಆಡಳಿತ ಮಂಡಳಿಯಲ್ಲಿ ಹಲವು ಬದಲಾವಣೆಗಳನ್ನು ತರುವುದರೊಂದಿಗೆ ಸಂಘದ ಅಭ್ಯುದಯಕ್ಕಾಗಿ ಶ್ರಮಿಸುತ್ತೇವೆ. ನಾವು ಜಯಗಳಿಸಿ ಮೊದಲು ಮಾಡುವ ಕೆಲಸ ಅನರ್ಹ ಮತರದಾರರನ್ನು ಗುರುತಿಸುವುದು, ಸದಸ್ಯರು ಹಾಗೂ ಆಡಳಿತ ಮಂಡಳಿಯವರ ಸ್ನೇಹ ಸಂಪರ್ಕವನ್ನು ವೃದ್ಧಿಗೊಳಿಸುವುದು ಸೂದನ ಎಸ್.ಈರಪ್ಪ ಹಾಗೂ ಕಿಮ್ಮುಡಿರ ಜಗದೀಶ್ ತಿಳಿಸಿದ್ದಾರೆ. ಸಂಘದ ಸದಸ್ಯರುಗಳಾದ ನಮಗೆ ಮತದಾನ ಮಾಡಿ ಗೆಲ್ಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.