![](https://newsdeskkannada.com/wp-content/uploads/2025/02/Z-ND-ADVT-18.jpg)
![](https://newsdeskkannada.com/wp-content/uploads/2025/02/Z-ADVT-TEACHERS-11.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-9.jpg)
ಮಡಿಕೇರಿ ಫೆ.15 NEWS DESK : ನಗರದ ‘ಅಂಬೇಡ್ಕರ್ ಭವನ’ದ ಕುರಿತು ಅನಗತ್ಯ ಗೊಂದಲಗಳನ್ನು ಹುಟ್ಟು ಹಾಕಿ, ಹೋರಾಟಕ್ಕೆ ಮುಂದಾಗುವುದಕ್ಕೆ ಬದಲಾಗಿ ಅದನ್ನು ಕೈಬಿಟ್ಟು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ದಲಿತ ಮುಖಂಡರು ಮುಂದಾಗಬೇಕೆಂದು ಮೂರ್ನಾಡಿನ ಜೈ ಭೀಮ್ ಯುವಕ ಸಂಘದ ಅಧ್ಯಕ್ಷರಾದ ಈರ ಸುಬ್ಬಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಅಂಬೇಡ್ಕರ್ ಭವನಕ್ಕೆ ಸಮಬಂಧಿಸಿದಂತೆ ಇತ್ತೀಚೆಗೆ ನಿರಾಧಾರ ಆರೋಪಗಳನ್ನು ಮಾಡಲಾಗುತ್ತಿದೆ. ಭವನವನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದ್ದು, ಸಮುದಾಯ ಬಾಂಧವರ ಕಾರ್ಯಕ್ರಮಗಳಿಗೆ, ಅಂಬೇಡ್ಕರ್ ಕುರಿತ ಸರ್ಕಾರಿ ಕಾರ್ಯಕ್ರಮಗಳಿಗೆ ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ಹೇಳಿದರು. ಅಂಬೇಡ್ಕರ್ ಭವನ ನಿರ್ಮಾಣದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಅವರ ಪಾತ್ರ ಮಹತ್ವದ್ದೆಂದು ತಿಳಿಸಿದ ಈರ ಸುಬ್ಬಯ್ಯ, ಉತ್ತಮವಾಗಿ ನಡೆಯುತ್ತಿರುವ ಅಂಬೇಡ್ಕರ್ ಭವನದ ಕುರಿತು ಗೊಂದಲದ ಹೇಳಿಕೆ ನೀಡುವ ಬದಲಾಗಿ, ವಿವಿಧೆಡೆಗಳಲ್ಲಿ ನಿರ್ವಹಣೆ ಇಲ್ಲದೆ ಹಾಳಾಗುತ್ತಿರುವ ಭವನಗಳ ನಿರ್ವಹಣೆಗೆ ಆರೋಪ ಮಾಡುವವರು ಮುಂದಾದಲ್ಲಿ ತಮ್ಮ ಬೆಂಬಲವೂ ಇರುವುದಾಗಿ ತಿಳಿಸಿದರು. ಮೂರ್ನಾಡು ಜೈ ಭೀಮ್ ಯುವಕ ಸಂಘದ ಉಪಾಧ್ಯಕ್ಷ ರಘು ಬೈರ ಮಾತನಾಡಿ, ಅಂಬೇಡ್ಕರ್ ಭವನವನ್ನು ಮುಂದಿಟ್ಟುಕೊಂಡು ದಲಿತರೆ ಪರಸ್ಪರ ಕಚ್ಚಾಡುವುದು ಸರಿಯಲ್ಲ. ನಾವೆಲ್ಲ ಒಗ್ಗಟ್ಟಾಗಿ ಮುನ್ನಡೆಯುವ ಅಗತ್ಯವಿದೆಯೆಂದು ತಿಳಿಸಿ, ಮಡಿಕೇರಿಯ ಅಂಬೇಡ್ಕರ್ ಭವನವನ್ನು ದಲಿತ ಸಂಘಟನೆಗಳ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದರು. ಮಡಿಕೇರಿ ಜೈ ಭೀಮ್ ಸಂಘದ ಪ್ರಮುಖ ಮುದ್ದುರಾಜ್ ಮಾತನಾಡಿ, ಅಂಬೇಡ್ಕರ್ ಭವನದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಯಾವುದೇ ದುರುಪಯೋಗಗಳು ನಡೆದಿಲ್ಲ. ಹೀಗಿದ್ದೂ ಅನಗತ್ಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮೂರ್ನಾಡು ಜೈ ಬೀಮ್ ಯುವಕ ಸಂಘದ ಸದಸ್ಯರಾದ ಜಗದೀಶ್ ಹಾಗೂ ರಘು ಹೆಚ್.ಪಿ ಉಪಸ್ಥಿತರಿದ್ದರು.