ಮಡಿಕೇರಿ NEWS DESK ಫೆ.17 : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಮಾನವ ಹಕ್ಕುಗಳ ಅಂತರ ರಾಷ್ಟ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಬೆಂಬಲ ಸೂಚಿಸಿದ್ದಾರೆ. ಮಡಿಕೇರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆಯೇ ನೌಕರರು ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಸರಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ದೊರೆತ್ತಿತ್ತು. ಈ ಕಾರಣದಿಂದ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರವನ್ನು ಕೈ ಬಿಟ್ಟಿದ್ದರು.
ಆದರೆ ಕೊಟ್ಟ ಭರವಸೆ ಇಲ್ಲಿಯವರೆಗೆ ಈಡೇರಿಲ್ಲ, ಇದರಿಂದ ಬೇಸರಗೊಂಡಿರುವ ಆಡಳಿತ ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಇವರಿಗೆ ಕೆಲವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಸರ್ಕಾರ ಹಿಂದೆ ಸರಿದಿದೆ. ಇವರುಗಳು ಕೆಲಸಕ್ಕೆ ಸೇರಿದ ನಂತರ ಇಂತಿಷ್ಟು ಸಮಯದ ಬಳಿಕ ವರ್ಗಾವಣೆಯನ್ನು ಮಾಡಬೇಕು. ವಯಸ್ಸಾದ ತಂದೆ, ತಾಯಂದಿರು, ಪತಿ-ಪತ್ನಿ ಬೇರೆ ಊರಿನಲ್ಲಿ ಕೆಲಸದಲ್ಲಿದ್ದಾಗ ವರ್ಗಾವಣೆ ಕೇಳುವುದರಲ್ಲಿ ತಪ್ಪೇನಿಲ್ಲ. ಕೆಲವು ಗ್ರಾಮಗಳು ಇವರ ಕಾರ್ಯ ವ್ಯಾಪ್ತಿಗೆ ಬಂದಾಗ ಕಚೇರಿ, ಶೌಚಾಲಯಗಳು ಇತ್ಯಾದಿ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಮಳೆಗಾಲದಲ್ಲಿ ಮನೆಗಳು ಬಿದ್ದಾಗ ಸ್ಥಳ ಪರಿಶೀಲನೆಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಹೋಗಬೇಕು ಮತ್ತು ಮಹಿಳಾ ಗ್ರಾಮ ಆಡಳಿತ ಅಧಿಕಾರಿಗಳು ಒಬ್ಬರೇ ಕಾಡು, ಗುಡ್ಡ ಪ್ರದೇಶದಲ್ಲಿ ಸಂಚರಿಸಬೇಕು. ಮೊಬೈಲ್ ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ಹೆಚ್ಚು ಕಷ್ಟ ಪಡುತ್ತಿದ್ದಾರೆ. ರಾಜ್ಯ ಸರ್ಕಾರ ಇವರ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ಮೂಲಕ ಸಾರ್ವಜನಿಕರ ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹರೀಶ್ ಜಿ.ಆಚಾರ್ಯ ಒತ್ತಾಯಿಸಿದರು. ಈ ಬಗ್ಗೆ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರವನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.










