



ಮಡಿಕೇರಿ ಫೆ.19 NEWS DESK : ಪೆರುಂಬಾಡಿ ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿಯ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು.
ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಯಾದ ಮೊಬೈಲ್ ಬಳಕೆ, ಶಿಕ್ಷಣದ ಭವಿಷ್ಯವನ್ನೇ ಹಾಳು ಮಾಡುತ್ತಿರುವ ಸಾಮಾಜಿಕ ಜಾಲತಾಣ, ಪರಿಸರ ಉಳಿವಿಗಾಗಿ ಜಾಗೃತಿ, ದುಶ್ಚಟಗಳಿಂದ ದೂರವಾಗಿ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ ಎಂಬ ಸಂದೇಶ, ತಂದೆ ತಾಯಿಯ ಪ್ರೀತಿಯ ವಾತ್ಸಲ್ಯದ ಮಕ್ಕಳಾಗೋಣ, ಆಚಾರ ವಿಚಾರ ಸಂಸ್ಕೃತಿ ಪರಂಪರೆಯನ್ನ ಬಿಂಬಿಸುವ ಕಿರು ನಾಟಕ ಪ್ರದರ್ಶನದೊಂದಿಗೆ
ಯೋಧರ ಸ್ಮರಣೆ, ಸೇವಾ ಮನೋಭಾವದ ಸಾಮಾಜಿಕ ಕಳಕಳಿಯ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಗಮನ ಸೆಳೆಯಿತು. ಇದೇ ಸಂದರ್ಭ ಸಾಹಿತ್ಯ ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ, ಕೋಲಾಟ, ಕೊಡವ ನೃತ್ಯ, ಆದಿವಾಸಿ ನೃತ್ಯ ಸೇರಿದಂತೆ ವಿವಿಧ ಭಾಷಾ ಸಂಸ್ಕೃತಿಯ ಹಾಡು, ನೃತ್ಯೋತ್ಸವ ರಂಜಿಸಿತು. ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ರೀಡೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡ ಶಾಲಾ, ಕಾಲೇಜು, ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಯೋಧ ಅಬ್ದುಲ್ ಸಲಾಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಡ ನಿರ್ಗತಿಕ ಮಕ್ಕಳು ಸೇರಿದಂತೆ ಗ್ರಾಮೀಣ ಭಾಗದ ಸುತ್ತಮುತ್ತಲ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಉತ್ತಮ ಭವಿಷ್ಯವನ್ನ ರೂಪಿಸಲು ಮುಂದಾಗಿರುವು ಶಿಕ್ಷಣ ಸಂಸ್ಥೆಯ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಂಶುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ ಮಾತನಾಡಿ, ಶಾಲಾ ಕಾಲೇಜಿನಲ್ಲಿ ಸುಮಾರು 350ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಕಲಿಯುತ್ತಿದ್ದು, ಇದರಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಬಡ ನಿರ್ಗತಿಕ ಸುಮಾರು ನೂರು ಮಕ್ಕಳಿಗೆ ಉಚಿತ ಶಿಕ್ಷಣವು ನೀಡಲಾಗುತ್ತಿದೆ. ಮಕ್ಕಳ ಭವಿಷ್ಯವನ್ನು ರೂಪಿಸಲು ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಕಡ್ಡಾಯವಾಗಿ ಕಳಿಸುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಿದಲ್ಲಿ ಪ್ರತಿಭಾನ್ವಿತರಾಗಿ ಸಾಧನೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದರು. ಪ್ರಾಂಶುಪಾಲೆ ಎನ್.ಜಿ.ಭಾನುಮತಿ ಮಾತನಾಡಿ, ಸಂಸ್ಥೆಯ ಶಾಲಾ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಮುನ್ನಡೆಯುತ್ತಿದ್ದಾರೆ, ಶಿಕ್ಷಕರುಗಳ ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಕ್ರೀಡಾ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ತಾಲೂಕು, ಜಿಲ್ಲೆ, ರಾಜ್ಯ, ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಸಾಧನೆ ಮೂಲಕ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ವಾತಾವರಣವಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಶಿಕ್ಷಕರುಗಳು ಮುಂದಾಗಿದ್ದಾರೆ ಎಂದರು. ಈ ಸಂದರ್ಭ ಪ್ರಮುಖರಾದ ರಶೀದ್ ಹಾಜಿ, ಅಬ್ದುಲ್ ಕರೀಂ ಹಾಜಿ, ಸಮಾಜ ಸೇವಕ ನಾಸರ್, ಶೇಕ್ ಹುಸೇನ್, ಮಣಿ ಮಹಮ್ಮದ್, ಅಬ್ದುಲ್ ರೆಹಮಾನ್, ಇಸ್ಮಾಯಿಲ್ ಉಸ್ತಾದ್,
ಬಶೀರ್ ಅಹಮದ್, ಪಿಟಿಎ ಅಧ್ಯಕ್ಷ ಶಬೀರ್, ಘನಿ ಉಸ್ತಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.