ಪೊನ್ನಂಪೇಟೆ ಫೆ.19 NEWS DESK : ಕೇಂದ್ರ ಸರ್ಕಾರ 13ನೇ ಲೋಕಸಭೆಯಲ್ಲಿ ಮಂಡಿಸಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ವಿರೋಧಿಸುತ್ತದೆ. ಈ ಮಸೂದೆ ಪಕ್ಷಪಾತದಿಂದ ಕೂಡಿದ್ದು, ಅಸಾಂವಿಧಾನಿಕ ಮತ್ತು ಮುಸ್ಲಿಂ ವಿರೋಧಿಯಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ.ಎ.ಹನೀಫ್ ದೂರಿದ್ದಾರೆ. ಈ ಕುರಿತು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಸಂಘಟನೆಗಳ, ಜನ ಪ್ರತಿನಿಧಿಗಳ ಅಭಿಪ್ರಾಯವನ್ನು ಪರಿಗಣಿಸದೇ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗುತ್ತಿದೆ. ಆದ್ದರಿಂದ ಕೇಂದ್ರದ ಈ ಅಸಂವಿಧಾನಿಕ ನಡೆಯ ವಿರುದ್ಧ ಪ್ರಜ್ಞಾವಂತರು ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಧ್ವನಿ ಎತ್ತಬೇಕು ಎಂದರು. ಕೇಂದ್ರ ಸರ್ಕಾರದ ಉದ್ದೇಶಿತ ನೂತನ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದರೆ ಅದು ಸಂವಿಧಾನ ಬಾಹಿರವಾಗುತ್ತದೆ. ವಕ್ಫ್ ಆಸ್ತಿ ವಶಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಹುನ್ನಾರ ಮಾಡಿದೆ ಎಂದು ಪಿ. ಎ. ಹನೀಫ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಘಟಕದ ಉಪಾಧ್ಯಕ್ಷ ಎಂ.ಎಂ.ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ಸೈಯದ್ ಭಾವ, ವಿವಿಧ ಬ್ಲಾಕ್ ಘಟಕದ ಅಧ್ಯಕ್ಷ ಅಕ್ಮಲ್ ಪಾಷಾ, ಕೋಳುಮಂಡ ರಫೀಕ್, ಸಿ.ಎ. ಜುನೈದ್ ಉಪಸ್ಥಿತರಿದ್ದರು.










