ಮಡಿಕೇರಿ NEWS DESK ಮಾ.2 : ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಮತ್ತು ಜನಪರ ಅಂಶಗಳನ್ನು ಅಳವಡಿಸುವಂತೆ ಒತ್ತಾಯಿಸಿರುವ ವಿವಿಧ ಬೇಡಿಕೆಗಳ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ರಚಿಸಿರುವ “ಜನತಾ ಬಜೆಟ್” ಪ್ರತಿಯನ್ನು ಪಕ್ಷದ ಪ್ರಮುಖರು ಶಾಸಕದ್ವಯರಿಗೆ ಸಲ್ಲಿಸಿದರು. ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಸಿನ್ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರನ್ನು ನಗರದಲ್ಲಿ ಭೇಟಿಯಾಗಿ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು. 2025-26 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುವ ಸಂದರ್ಭ ವನ್ಯಜೀವಿಗಳ ಸಮಸ್ಯೆ, ರೈತರ ಹಾಗೂ ಕಾರ್ಮಿಕ ಸಂಕಷ್ಟಗಳಿಗೆ ಪರಿಹಾರ, ಶಿಕ್ಷಣಕ್ಕೆ ಒತ್ತು ನೀಡಿ ಕಾನೂನು ಕಾಲೇಜು ಸ್ಥಾಪನೆ, ಉನ್ನತ ಶಿಕ್ಷಣದ ತರಬೇತಿ ಕೇಂದ್ರಗಳ ಆರಂಭ, ಕೊಡಗು ವಿವಿಯನ್ನು ಜಿಲ್ಲೆಯಲ್ಲೇ ಉಳಿಸುವುದು, ಜನರ ಆರೋಗ್ಯದ ಹಿತದೃಷ್ಟಿಯಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭ ಸೇರಿದಂತೆ ಸುಮಾರು 12 ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು. ಈ ಎಲ್ಲಾ ಬೇಡಿಕೆಗಳನ್ನು ಪ್ರಸ್ತುತ ವರ್ಷದ ಬಜೆಟ್ ನಲ್ಲೇ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿಗಳ ಮನವೊಲಿಸಬೇಕೆಂದು ಅಮೀನ್ ಮೊಹಸಿನ್ ಶಾಸಕದ್ವಯರಲ್ಲಿ ಕೋರಿದರು. ಮನವಿಗೆ ಶಾಸಕರುಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಅವರು ಇದೇ ಸಂದರ್ಭ ತಿಳಿಸಿದರು. ಎಸ್ಡಿಪಿಐ ಪಕ್ಷದ ನಗರಸಭಾ ಸದಸ್ಯರುಗಳಾದ ಎಂ.ಕೆ.ಮನ್ಸೂರ್ ಆಲಿ, ಬಶೀರ್ ಅಹ್ಮದ್ ಹಾಗೂ ಮೇರಿ ವೇಗಸ್ ನಿಯೋಗದಲ್ಲಿದ್ದರು.











