


ಮಡಿಕೇರಿ ಮಾ.13 NEWS DESK : ದಕ್ಷಿಣ ಕೊಡಗು ಭಾಗದಲ್ಲಿ ಮತ್ತೆ ಹುಲಿ ಉಪಟಳ ಮಿತಿ ಮೀರಿದೆ. ಮೇಯಲು ಬಿಟ್ಟಿದ್ದ ಹಸುವೊಂದರ ಮೇಲೆ ಇಂದು ಹುಲಿ ದಾಳಿ ಮಾಡಿರುವ ಘಟನೆ ಹುದಿಕೇರಿ ಸಮೀಪ ಕೋಣಗೇರಿಯಲ್ಲಿ ನಡೆದಿದೆ. ಬೆಳೆಗಾರ ಚೆಕ್ಕೇರ ಗಣಪತಿ ಅವರಿಗೆ ಸೇರಿದ ಹಸುವನ್ನು ಮೇಯಲೆಂದು ಬಿಡಲಾಗಿತ್ತು. ಹಾಡಹಗಲೇ ದಾಳಿ ಮಾಡಿದ ಹುಲಿ ಹಸುವನ್ನು ಕೊಂದು ದೇಹದ ಅರ್ಧಭಾಗವನ್ನು ತಿಂದು ಹಾಕಿದೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕ ಮೂಡಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ತೋಟಕ್ಕೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಹುಲಿಯನ್ನು ಸೆರೆ ಹಿಡಿಯಬೇಕೆಂದು ಭಯಭೀತರಾಗಿರುವ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಲೇ ಇದ್ದು, ಅರಣ್ಯ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.