


ಮಡಿಕೇರಿ ಮಾ.13 NEWS DESK : ಶಾಸಕದ್ವಯರ ನಿರಂತರ ಪ್ರಯತ್ನದಿಂದ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆತ್ತಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ಬಗರ್ ಹುಕುಂ ತಾಲ್ಲೂಕು ಸಮಿತಿ ಸದಸ್ಯ ಜೆ.ಎಲ್.ಜನಾರ್ಧನ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ- ಸೋಮವಾರಪೇಟೆ ಜನತೆಯ ದಶಕಗಳ ಕನಸು ನನಸಾಗಿದೆ. ಮಡಿಕೇರಿ- ದೋಣಿಗಲ್ ನಡುವೆ ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ 900 ಕೋಟಿ ರೂ. ಯೋಜನೆಯನ್ನು ರಾಜ್ಯ ಬಜೆಟ್ ನಲ್ಲಿ ಘೋಷಿಸಲಾಗಿದೆ. ಇದಕ್ಕೆ ಕಾರಣಕರ್ತರಾದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಅಭಿನಂದನಾರ್ಹರು. ಜನರ ಹಲವು ವರ್ಷಗಳ ಬೇಡಿಕೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿದೆ. ಮಡಿಕೇರಿ – ದೋಣಿಗಲ್ -ಮಾದಾಪುರ – ಸೋಮವಾರಪೇಟೆ – ಶನಿವಾರಸಂತೆ – ಕೊಡ್ಲಿಪೇಟೆಯ 95 ಕಿ.ಮೀ ಅಂತರದ ಮಾರ್ಗ ಸರ್ವಋತು ರಸ್ತೆಯಾಗಿ ಅಭಿವೃದ್ಧಿಯಾಗಲಿದೆ. ಇದು ಡಾ.ಮಂತರ್ ಗೌಡ ಅವರ ಪ್ರಯತ್ನದ ಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕುಶಾಲನಗರ ತಾಲ್ಲೂಕು ಆಸ್ಪತ್ರೆಯ ನವೀಕರಣ, ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ 12 ಬುಡಕಟ್ಟು ಸಮುದಾಯಗಳ 47,859 ಕುಟುಂಬಗಳಿಗೆ 120 ಕೋಟಿ ರೂ. ವೆಚ್ಚದಲ್ಲಿ ಪೌಷ್ಟಿಕ ಆಹಾರದ ಕಿಟ್ ಗಳ ವಿತರಣೆ, ಬುಡಕಟ್ಟು ಜನಾಂಗದ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುವ 78 ಬುಡಕಟ್ಟು ವಸತಿ ಶಾಲೆಗಳಲ್ಲಿ 2025-26ನೇ ಸಾಲಿನಿಂದ 7ನೇ ತರಗತಿಯನ್ನು ಪ್ರಾರಂಭಿಸಲಾಗುವುದು. ಕೊಡಗು ಜಿಲ್ಲೆಯ ಐದು ವಸತಿ ಶಾಲೆಗಳನ್ನು 12ನೇ ತರಗತಿಯವರೆಗೆ ಮೇಲ್ದರ್ಜೆಗೇರಿಸಲಾಗುವುದು. ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಸೋಲಿಗ, ಹಲಸರು, ಜೇನು ಕುರುಬ, ಗೌಡಲು, ಸಿದ್ಧಿ, ಕುಡಿಯ, ಮಲೆಕುಡಿಯ, ಕಾಡುಕುರುಬ, ಇರುಳಿಗ, ಕೊರಗ, ಬೆಟ್ಟಕುರುಬ, ಯರವ, ಪಣಿಯನ್ ಇತ್ಯಾದಿ ಪರಿಶಿಷ್ಟ ಪಂಗಡದ ಬುಡಕಟ್ಟುಗಳ ಜನಾಂಗದವರಿಗೆ ಮೂಲಸೌಕರ್ಯಗಳನ್ನು ಒದಗಿಸಲು 200 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ 13 ಬುಡಕಟ್ಟು ಜನಾಂಗಗಳಾದ ಜೇನು ಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್, ಹಲಸರು, ಗೌಡಲು, ಸಿದ್ಧಿ, ಬೆಟ್ಟಕುರುಬ, ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ ಈ ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿಯನ್ನು ಕೈಗೊಳ್ಳಲಿದೆ. ಭಾರೀ ಮಳೆಯಿಂದಾಗಿ ಹಾನಿ ಒಳಗಾಗಿರುವ ರಸ್ತೆ ಮತ್ತು ಸೇತುವೆಗಳನ್ನು 20 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೂಡಿಗೆ ಕ್ರೀಡಾ ಶಾಲೆಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ ಸರ್ಕಾರ 3 ಕೋಟಿ ರೂ. ಒದಗಿಸಿದೆ. ಮಾನವ-ಆನೆ ಸಂಘರ್ಷವನ್ನು ತಡೆಗಟ್ಟಲು 2015 ರಿಂದ ಇಲ್ಲಿಯವರೆಗೆ 392 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಗಳನ್ನು ನಿರ್ಮಿಸಲಾಗಿದೆ. ಇನ್ನೂ 150 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಕಾಮಗಾರಿಗಳಿಗಾಗಿ 2025-26ನೇ ಸಾಲಿನಲ್ಲಿ 60 ಕೋಟಿ ರೂ. ಮೀಸಲಿರಿಸಲಾಗಿದೆ. ಇದು ವರದಾನವಾಗಿರುವ ದಾಖಲೆಯ ಬಜೆಟ್ ಆಗಿದ್ದು, ಇದೆಲ್ಲವೂ ಕೊಡಗು ಜಿಲ್ಲೆಯ ಶಾಸಕದ್ವಯರ ನಿರಂತರ ಪ್ರಯತ್ನದ ಫಲವಾಗಿದೆ. ಜನಪರ ಕಾಳಜಿಯ ಶಾಸಕರುಗಳಿಂದ ಜಿಲ್ಲೆಯ ಅಭಿವೃದ್ಧಿ ವೇಗವನ್ನು ಪಡೆದುಕೊಳ್ಳುತ್ತಿದ್ದು, ರಾಜ್ಯ ಸರ್ಕಾರ ಕೂಡ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಜೆ.ಎಲ್.ಜನಾರ್ಧನ್ ತಿಳಿಸಿದ್ದಾರೆ.