


ಕುಶಾಲನಗರ ಮಾ.15 NEWS DESK : ಕುಶಾಲನಗರ ತಾಲ್ಲೂಕಿನ ಕಾವೇರಿ ನದಿ ದಂಡೆಯಲ್ಲಿರುವ ಗಡಿಭಾಗ ಶಿರಂಗಾಲ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಿಯ ದ್ವೈವಾರ್ಷಿಕ ಹಬ್ಬದ ಉತ್ಸವ ಹಾಗೂ ಜಾತ್ರೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಿಯನ್ನು ಭಕ್ತಾದಿಗಳು ತಮಟೆ ಮತ್ತು ಮಂಗಳವಾದ್ಯದೊಂದಿಗೆ ಪವಿತ್ರ ಬನಕ್ಕೆ ದೇವಿಗೆ ಸಂಬಂಧಿಸಿದ ಆಭರಣಗಳನ್ನೊಳಗೊಂಡ ಬುಟ್ಟಿ ಮತ್ತಿತರರ ಸಾಂಪ್ರದಾಯಿಕ ಸಾಮಗ್ರಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಗ್ರಾಮದ ಕೋಟೆಯ ಗದ್ದಿಗೆಯಿಂದ ಆರಂಭಗೊಂಡ ದೇವಿಯ ಮೆರವಣಿಗೆ ಮತ್ತು ಉತ್ಸವವು ಮಧ್ಯರಾತ್ರಿ 1.15 ಗಂಟೆ ವೇಳೆಗೆ ಪವಿತ್ರ ಬನವನ್ನು ತಲುಪಿತು. ದೇವಿಯ ಬನದಲ್ಲಿ ಹಾಕಿದ್ದ ಅಗ್ನಿಕುಂಡವನ್ನು ಹರಕೆ ಹೊತ್ತ ಭಕ್ತಾಧಿಗಳು ತುಳಿದು ದೇವರ ದರ್ಶನ ಪಡೆದರು. ಗ್ರಾಮದ ಮಂಟಿಗಮ್ಮ ದೇವಸ್ಥಾನದಲ್ಲಿ ಬೆಳಿಗ್ಗಿನಿಂದಲೇ ಆರಂಭಗೊಂಡ ಮಂಟಿಗಮ್ಮ ದೇವಿಯ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಾವಿರಾರು ಮಂದಿ ಭಕ್ತಾಧಿಗಳು ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿದರು. ಮಂಟಿಗಮ್ಮ ದೇವಸ್ಥಾನದಲ್ಲಿ ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸುವ ಜಾನಪದ ಜಾತ್ರೆಯು ಜನರ ಗಮನ ಸೆಳೆಯಿತು. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಂಟಿಗಮ್ಮ ದೇವಿಯ ಹಬ್ಬ ಮತ್ತು ಉತ್ಸವವು ಗ್ರಾಮೀಣ ಭಾಗದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಈ ದೇವಿಯ ಉತ್ಸವದಲ್ಲಿ ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಗಡಿ ಗ್ರಾಮಗಳ ಜನರು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಗ್ರಾಮ ದೇವತೆ ಹಬ್ಬದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಹಾಗೂ ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು. ಭಕ್ಷ್ಯ ಭೋಜನದ ಸವಿ :: ಹಬ್ಬಕ್ಕೆ ಬರುವ ನೆಂಟರಿಷ್ಟರು, ಅತಿಥಿಗಳಿಗೆ ಗ್ರಾಮಸ್ಥರು ತಮ್ಮ
ಮನೆ ಮನೆಗಳಲ್ಲಿ ತಯಾರಿಸುವ ವಿವಿಧ ಭಕ್ಷ್ಯ ಭೋಜನದ ಸವಿ ಸೇರಿದಂತೆ ಸಿಹಿ ಪದಾರ್ಥಗಳನ್ನು ಉಣಬಡಿಸಿ ಅತಿಥಿಗಳನ್ನು ಸಂತೋಷಪಡಿಸಿದರು.
ಮದ್ದುಗುಂಡುಗಳ ಪ್ರದರ್ಶನ :: ಹಬ್ಬದ ಅಂಗವಾಗಿ ರಾತ್ರಿ ಗ್ರಾಮದ ಸಂತೆಮಾಳ ಮೈದಾನದಲ್ಲಿ ಆಯೋಜಿಸಲಾಗಿದ್ದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುದುಗಳ ಚಿತ್ತಾರ ಕಣ್ಮನ ಸೆಳೆದವು. ಗ್ರಾಮ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್ , ಉಪಾಧ್ಯಕ್ಷ ಎಸ್.ಜೆ.ಉಮೇಶ್, ಕಾರ್ಯದರ್ಶಿ ಎಂ.ಎಸ್.ಗಣೇಶ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ವಿವಿಧ ಉಪ ಸಮಿತಿಗಳ
ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ಅಚ್ಚುಕಟ್ಟಾಗಿ ನಡೆದವು. ಶಿರಂಗಾಲ ಗ್ರಾಮದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯಲಿರುವ ಶ್ರೀ ಮಂಟಿಗಮ್ಮ ದೇವರ ಹಬ್ಬ ಹಾಗೂ ಜಾತ್ರೋತ್ಸವವು ಗ್ರಾಮದ ಜನರಲ್ಲಿ ಪರಸ್ಪರ ಪ್ರೀತಿ- ವಿಶ್ವಾಸದೊಂದಿಗೆ ಗ್ರಾಮದಲ್ಲಿ ಶಾಂತಿ, ಸಹಬಾಳ್ವೆ, ಸೌಹಾರ್ದತೆ ಹಾಗೂ ಭಾವೈಕ್ಯತೆಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ.
ಗ್ರಾಮೀಣ ಕ್ರೀಡಾಕೂಟ: ಗ್ರಾಮ ದೇವತಾ ಸಮಿತಿ ವತಿಯಿಂದ ದೇವಿಯ ಉತ್ಸವ ಅಂಗವಾಗಿ ಶನಿವಾರ ಕ್ರಿಕೆಟ್ ಟೂರ್ನಿ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.
ಮಾ.17 ರಂದು ವಾರ್ಷಿಕ ರಥೋತ್ಸವ :: ಶಿರಂಗಾಲ ಗ್ರಾಮದ ಕಾವೇರಿ ನದಿ ದಂಡೆ ಮೇಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.17 ರಂದು ಮಧ್ಯಾಹ್ನ 12.30 ಗಂಟೆಗೆ ಶ್ರೀ ಉಮಾಮಹೇಶ್ವರ ವಾರ್ಷಿಕ ರಥೋತ್ಸವ ನಡೆಯಲಿದೆ ಎಂದು ತಿಳಿಸಲಾಗಿದೆ.