


ಮಡಿಕೇರಿ NEWS DESK ಮಾ.15 : ನಿವೇಶನದ ಬೇಡಿಕೆ ಮುಂದಿಟ್ಟುಕೊAಡು ಕೆಲವರು ಹೋರಾಟದ ಹೆಸರಿನಲ್ಲಿ ಕೃಷಿಕರ ಭೂಮಿಗೆ ಅಕ್ರಮ ಪ್ರವೇಶ ಮಾಡಿ ಶೆಡ್‌ಗಳನ್ನು ನಿರ್ಮಿಸಿಕೊಂಡು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮತ್ತು ಅಕ್ರಮ ಶೆಡ್‌ಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಸೋಮವಾರಪೇಟೆಯ ನಮ್ಮ ಭೂಮಿ ನಮ್ಮ ಹಕ್ಕು ರೈತ ಹೋರಾಟ ಸಮಿತಿ ಹಾಗೂ ಹೊದ್ದೂರು ರೈತ ಸಂಘಗಳು ಹೊದ್ದೂರಿನ ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಪ್ರತಿಭಟನಾ ಸಭೆ ನಡೆಸಿತು. ಸಭೆೆಯಲ್ಲಿ ಪಾಲ್ಗೊಂಡ ರೈತ ಸಂಘದ ಪ್ರಮುಖರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಹೊದ್ದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೆಚ್.ಎ.ಹಂಸ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಕೃಷಿಕರ ಜಮೀನಿನಲ್ಲಿ ನಿರ್ಮಿಸಲಾಗಿರುವ ಅಕ್ರಮ ಶೆಡ್‌ಗಳನ್ನು 15 ದಿನಗಳ ಒಳಗೆ ತೆರವುಗೊಳಿಸಬೇಕು, ರೈತರ ಮನೆ ಖಾತೆ ಬದಲಾವಣೆ, ಹೋಂ ಸ್ಟೇ ದೃಢೀಕರಣ ಪತ್ರ ಮತ್ತಿತರ ದಾಖಲೆಗಳ ವಿಲೇವಾರಿಯಲ್ಲಿ ವಿಳಂಬ ತೋರುತ್ತಿರುವ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆಗೊಳಿಸಬೇಕು. ಪಂಚಾಯ್ತಿಯ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರ ವಿರುದ್ಧ ಅಕ್ರಮ ಶೆಡ್ ನಿರ್ಮಾಣ ಸೇರಿದಂತೆ ವಿವಿಧ ಆರೋಪಗಳು ಇರುವ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸಬೇಕು. ಪಂಚಾಯ್ತಿ ಅನುದಾನದಲ್ಲಿ ಕೃಷಿಕರಿಗೆ ಆಗುತ್ತಿರುವ ತಾರತಮ್ಯ ಸರಿಪಡಿಸಬೇಕು, ಹೊದ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದನಕರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಜಮೀನು ಮಂಜೂರು ಮಾಡಬೇಕು, ಕೃಷಿಕರ ಮನೆಗಳಿಗೆ ಮತ್ತು ಕೃಷಿ ಯಂತ್ರೋಪಕರಣ ಸಾಗಾಟಕ್ಕೆ ರಸ್ತೆ ನಿರ್ಮಿಸಬೇಕು, ಹೊದ್ದೂರು ಗ್ರಾಮದಲ್ಲಿ ಈಗಾಗಲೇ 9 ಕಾಲೋನಿಗಳಿದ್ದು, ಜನಸಂಖ್ಯೆ 2 ಸಾವಿರಕ್ಕೆ ಏರಿರುವುದರಿಂದ ಇನ್ನು ಮುಂದೆ ನಿವೇಶನ ರಹಿತರಿಗೆ ನಿವೇಶನ ಕಾಯ್ದಿರಿಸಬಾರದು ಎಂದು ಒತ್ತಾಯಿಸಲಾಗಿದೆ. ರೈತರ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿದವರನ್ನು 15 ದಿನಗಳ ಒಳಗೆ ತೆರವುಗೊಳಿಸದಿದ್ದಲ್ಲಿ ಪಿತ್ರಾರ್ಜಿತ ಆಸ್ತಿಗಳ ಮೂಲಕ ಹಾದು ಹೋಗುವ ರಸ್ತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಕೃಷಿ ಚಟುವಟಿಕೆಗಳಿಗೆ ಬಳಸಲಾಗುವುದೆಂದು ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ. ಹೊದ್ದೂರು ರೈತ ಸಂಘದ ಅಧ್ಯಕ್ಷ ಜಗತ್ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಸೋಮವಾರಪೇಟೆ ರೈತ ಹೋರಾಟ ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್, ಮಡಿಕೇರಿ ತಾ.ಪಂ ಮಾಜಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.