


ಮಡಿಕೇರಿ ಮಾ.17 NEWS DESK : ಸ್ಮಶಾನದ ಜಾಗದಲ್ಲಿ ಗಾಂಜಾ ಬೆಳೆಸಿದ್ದ ಆರೋಪಿಯನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. 1 ಕೆ.ಜಿ 730 ಗ್ರಾಂ ತೂಕದ 19 ಹಸಿ ಗಾಂಜಾ ಗಿಡಗಳೊಂದಿಗೆ ಹೇರೂರು ಗ್ರಾಮದ ನಿವಾಸಿ ಪ್ರಶಾಂತ್ (29) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಕುಶಾಲನಗರದ ಶೈಲಜಾ ಬಡವಾಣೆಯಲ್ಲಿರುವ ಸ್ಮಶಾನದ ಜಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದರು. ಸೋಮವಾರಪೇಟೆ ಡಿವೈಎಸ್‍ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಪಿಐ ಪ್ರಕಾಶ್.ಬಿ.ಜಿ, ಪಿಎಸ್‍ಐ ಗೀತಾ ಸಿಬ್ಬಂದಿಗಳು ಹಾಗೂ ಡಿಸಿಆರ್‍ಬಿ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ. ಮಾದಕ ವಸ್ತು ಮಾರಾಟ ಮತ್ತು ಸೇವನೆಯ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.