


ಮಡಿಕೇರಿ ಮಾ.22 NEWS DESK : ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಅಂಕನಳ್ಳಿಯ ಮನೆಹಳ್ಳಿ ಶ್ರೀ ತಪೋಕ್ಷೇತ್ರದಲ್ಲಿ ಏ.12 ರಿಂದ 14ರ ವರೆಗೆ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಜರುಗಲಿದೆಯೆಂದು ಕ್ಷೇತ್ರದ ಸ್ವಾಮೀಜಿಗಳಾದ ಶ್ರೀ ಮಹಾಂತ ಶಿವಲಿಂಗ ಸ್ವಾಮಿಗಳು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಏ.12 ರಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣದ ಮೂಲಕ ಚಾಲನೆ ದೊರೆಯಲಿದೆ. ಅಂದು ಸಂಜೆ 6.30 ಗಂಟೆಗೆ ಶ್ರೀ ಸ್ವಾಮಿಗೆ ಕಂಕಣ ಧಾರಣೆ, ಮಹಾಮಂಗಳಾರತಿ, 7 ಗಂಟೆಗೆ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿಯವರಿಗೆ ಸೂರ್ಯ ಮಂಡಲೋತ್ಸವ ಜರುಗಲಿದೆ ಎಂದು ಹೇಳಿದರು. ಏ.13 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಮದನಾಧಿ ಅನಘ ನಿರಂಜನ ಜಂಗಮ ಪೂಜೆ, ಸಂಜೆ 6.30 ಗಂಟೆಗೆ ಶ್ರೀ ಸ್ವಾಮಿಯವರ ‘ಅಡ್ಡಪಲ್ಲಕ್ಕಿ ಉತ್ಸವ’, ರಾತ್ರಿ 8.30 ಗಂಟೆಗೆ ದಾಸೋಹ ಜರುಗಲಿದೆ. ಏ.14 ರಂದು ಬೆಳಿಗ್ಗೆ 5 ಗಂಟೆಗೆ ಶ್ರೀ ಕ್ಷೇತ್ರನಾಥ ವೀರಭದ್ರಸ್ವಾಮಿಗೆ ‘ದುಗ್ಗಳ’ ಹಾಗೂ ‘ಅಗ್ನಿಕೊಂಡೋತ್ಸವ’ ಸೇವೆ, 6 ಗಂಟೆಗೆ ವಟುಗಳಿಗೆ ಲಿಂಗಧೀಕ್ಷಾ ಕಾರ್ಯಕ್ರಮ, 7 ಗಂಟೆಗೆ ಶ್ರೀ ಸ್ವಾಮಿಯವರ ‘ಸಣ್ಣ ಚಂದ್ರಮಂಡಲೋತ್ಸವ’, ಬೆ.11 ಗಂಟೆಗೆ ಶ್ರೀ ಪ್ರಸನ್ನ ತಪೋವನೇಶ್ವರಿ ಅಮ್ಮನವರಿಗೆ ‘ಮುತ್ತೈದೆ ಸೇವೆ’, ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ದಾಸೋಹ ಸೇವೆ ನೆರವೇರಲಿದೆ.
ಮಹಾ ರಥೋತ್ಸವ :: ಅಂದು ಸಂಜೆ 5 ಗಂಟೆಗೆ ಶ್ರೀ ಸ್ವಾಮಿಯವರ ‘ಪ್ರಾಕಾರ ಪಲ್ಲಕ್ಕಿ ಉತ್ಸವ’ದೊಂದಿಗೆ ಶ್ರೀ ಸ್ವಾಮಿಯವರು ರಥೋತ್ಸವಕ್ಕೆ ಭಿಜಯಂಗೈವುದು, ಸಂಜೆ 6.30 ಕ್ಕೆ ‘ಮಹಾ ರಥೋತ್ಸವ’ ನಡೆಯಲಿದೆ. ರಾತ್ರಿ 8 ಗಂಟೆಗೆ ಶ್ರೀ ವೃಷಭಲಿಂಗೇಶ್ವರ ಸ್ವಾಮಿಯವರ ಸನ್ನಿಧಾನದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಜರುಗಲಿದೆಯೆಂದು ಹೇಳಿದರು. ಏ.14ರಂದು ನಡೆಯಲಿರುವ ವಟುಗಳಿಗೆ ಲಿಂಗಧೀಕ್ಷಾ ಕಾರ್ಯಕ್ರಮಕ್ಕೆ ಏ.10ರ ಒಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ 9481059223, 9844181960 ಸಂಪರ್ಕಿಸಬಹುದು. ಧಾರ್ಮಿಕ ಸಮಾರಂಭ-ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದ ಪ್ರಮಖರಾದ ಎಸ್.ಮಹೇಶ್ ಅವರು ಮಾತನಾಡಿ, ಏ.14 ರಂದು ಸಂಜೆ 5 ಗಂಟೆಗೆ ‘ಧಾರ್ಮಿಕ ಸಮಾರಂಭ’ ಶ್ರೀ ಸಿದ್ಧಗಂಗಾ ಮಠದ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯಲಿದೆ. ಇದರಲ್ಲಿ ಸಂಸದ ಯದುವೀರ್ ಒಡೆಯರ್, ಜಿಲ್ಲೆಯ ಹಾಲಿ, ಮಾಜಿ ಶಾಸಕರುಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ತಪೋ ಕ್ಷೇತ್ರದ ‘ಸಮುದಾಯ ಭವನ’ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆಯೆಂದು ತಿಳಿಸಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ, ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಮಟ್ಟದ ಕೋಕೋ ಸ್ಪರ್ಧೆಯಲ್ಲಿ ವಿಜೇತ ಭಾರತ ತಂಡದ ಸದಸ್ಯರಾದ ಚೈತ್ರಾ , ಕಿರಿಯರ ವಿಭಾಗದ ಭಾರತೀಯ ಹಾಕಿ ತಂಡದ ತರಬೇತುದಾರರಾದ ಜನಾರ್ಧನ ಅವರನ್ನು ಸನ್ಮಾನಿಸಲಾಗುತ್ತದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದ ಪ್ರಮುಖರಾದ ಬಿ.ಬಿ.ಬಸಪ್ಪ, ಬಿ.ಎಸ್.ಪ್ರಕಾಶ್, ಸಿ.ಎಸ್.ರಾಜಶೇಖರ್, ಹೆಚ್.ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.