


ಮಡಿಕೇರಿ ಮಾ.22 NEWS DESK : ವಾಂಡರರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಾ.24ರಿಂದ ಮೇ 1ರವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ (ಮ್ಯಾನ್ಸ್ ಕಾಂಪೌಂಡ್)ದಲ್ಲಿ 31ನೇ ವರ್ಷದ ಉಚಿತ ಕ್ರೀಡಾ ಶಿಬಿರ ನಡೆಯಲಿದೆಯೆಂದು ಕ್ಲಬ್‍ನ ಪ್ರಮುಖರಾದ ಬೊಪ್ಪಂಡ ಶ್ಯಾಂ ಪೂಣಚ್ಚ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಕಿ, ಅಥ್ಲೆಟಿಕ್ಸ್, ಯೋಗ ತರಬೇತಿಗೆ ಸಂಬಂಧಿಸಿದಂತೆ ನಡೆಯುವ ಬೇಸಿಗೆ ಶಿಬಿರದಲ್ಲಿ 6 ರಿಂದ 16 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಶಿಬಿರ ಮಾ.24ರಿಂದ ಆರಂಭಗೊಂಡರು, ಹಿರಿಯ ಕ್ರೀಡಾಪಟು ಹಾಗೂ ತರಬೇತುದಾರರಾದ ದಿ.ಸಿ.ವಿ.ಶಂಕರ ಸ್ವಾಮಿ ಅವರ ಜನ್ಮದಿನವಾದ ಏ.1 ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ ಎಂದರು. ಪ್ರತಿ ದಿನ ಬೆಳಿಗ್ಗೆ 6.30 ರಿಂದ 8.30 ಗಂಟೆಯವರೆಗೆ ಶಿಬಿರ ನಡೆಯಲಿದೆ. ಆಸಕ್ತರು ಮಾ.24 ರಂದು ಬೆಳಗ್ಗೆ ಆಗಮಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹದು. ಆ ನಂತರದ ದಿನಗಳಲ್ಲು ಶಿಬಿರಕ್ಕೆ ಸೇರಲು ಅವಕಾಶವಿರುವುದಾಗಿ ಸ್ಪಷ್ಟಪಡಿಸಿದರು. ಕ್ಲಬ್ ಅಧ್ಯಕ್ಷರಾದ ಕೊಟೇರ ಮುದ್ದಯ್ಯ ಮಾತನಾಡಿ, ಶಿಬಿರದಲ್ಲಿ ನುರಿತ ತರಬೇತುದಾರರಿಂದ ಕ್ರೀಡಾ ತರಬೇತಿ ನೀಡಲಾಗುತ್ತದೆ. ಒಲಿಂಪಿಕ್ಸ್ ಹಾಗೂ ಅಂತರರಾಷ್ಟ್ರೀಯ ಹಾಕಿ ಆಟಗಾರರು ಬಂದು ಮಾರ್ಗದರ್ಶನ ಮಾಡಲಿದ್ದಾರೆಂದು ತಿಳಿಸಿದರು. ಕ್ಲಬ್‍ನ ಸದಸ್ಯರಾದ ಕುಡೆಕಲ್ ಸಂತೋಷ್ ಮಾತನಾಡಿ, ತಿಂಗಳ ಕಾಲ ನಡೆಯುವ ಶಿಬಿರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಪಾಲ್ಗೊಂಡು ಅಮೂಲ್ಯ ಸಲಹೆ ಸೂಚನೆಗಳನ್ನು ಶಿಬಿರಾರ್ಥಿಗಳಿಗೆ ನಿಡುವುದು ವಿಶೇಷ. ಶಿಬಿರದ ಅವಧಿಯಲ್ಲಿ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಪಿಕ್ ನಿಕ್ ಕರೆದೊಯ್ಯುವ ಮೂಲಕ ಅವರಲ್ಲಿ ಪರಿಸರದ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನವೂ ನಡೆಯುತ್ತದೆ. ಶಿಬಿರದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರವನ್ನು ಶಿಬಿರದ ಕೊನೆಯಲ್ಲಿ ನೀಡಲಾಗುತ್ತದೆಂದು ತಿಳಿಸಿದರು. ಕ್ರೀಡಾ ತರಬೇತಿ ಶಿಬಿರದ ಹೆಚ್ಚಿನ ಮಾಹಿತಿಗೆ 9448278081, 9972538584 ಸಂಪರ್ಕಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಕ್ಲಬ್‍ನ ಪ್ರಮುಖರಾದ ಬಾಬು ಸೋಮಯ್ಯ ಉಪಸ್ಥಿತರಿದ್ದರು.