


ಕುಶಾಲನಗರ ಮಾ.22 NEWS DESK : ನಾಲ್ಕು ಗೋಡೆಗಳ ನಡುವೆ ಸಿಲುಕಿಕೊಂಡಿದ್ದ ಮಹಿಳೆಗೆ ಇದೀಗ ಸ್ವಾವಲಂಬಿಯಾಗಿ ತನ್ನ ಪ್ರತಿಭೆಯನ್ನು ಹೊರಹೊಮ್ಮಿಸಲು ಹಲವು ಅವಕಾಶಗಳಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳ ಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಕರೆ ನೀಡಿದ್ದಾರೆ. ಕುಶಾಲನಗರದಲ್ಲಿ ಭೂಮಿಕಾ ಮಹಿಳಾ ಹಿತ ರಕ್ಷಣಾ ಸಮಿತಿಯ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಡುಗೆ ಮನೆಯಿಂದ ಅಂತರಿಕ್ಷದ ತನಕ ಇದೀಗ ಮಹಿಳೆಯರು ತಮ್ಮ ಸಾಧನೆ ಪ್ರದರ್ಶನ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಜ್ಞಾನವಿಕಾಸ ವೇದಿಕೆ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಈ ಮೂಲಕ ಲಕ್ಷಾಂತರ ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಯಾವುದೇ ಸಂದರ್ಭ ಮಹಿಳೆಯರು ತಮ್ಮ ಜವಾಬ್ದಾರಿಯನ್ನು ಮರೆಯದೆ ಕೌಟುಂಬಿಕ ಸಾಮರಸ್ಯವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿ.ಪಂ ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಅರಿವು ಜಾಗೃತಿ ಮೂಡಿಸಲು ಸಾಧ್ಯ. ಮಹಿಳೆ ಕುಟುಂಬದಲ್ಲಿ ಪ್ರತಿಯೊಬ್ಬರ ಬಗ್ಗೆ ಜವಾಬ್ದಾರಿ ವಹಿಸುತ್ತಾರೆ. ಸಂಘಟನೆಗಳ ಮೂಲಕ ಪರಸ್ಪರ ಉತ್ತಮ ಸಂಬಂಧ ಹೊಂದಲು ಸಾಧ್ಯ ಎಂದರಲ್ಲದೆ ಈ ಮೂಲಕ ಪ್ರತಿಯೊಬ್ಬರಿಗೂ ಧೈರ್ಯ ತುಂಬುವಂತಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಹೆಣ್ಣು ಮಗು ಇಲ್ಲದ ಕುಟುಂಬ ಪರಿಪೂರ್ಣವಲ್ಲ ಎಂದರು. ಸಂಸಾರ ಕಟ್ಟುವ ಕೈಗಳಿಗೆ ಹಿಂದಿನ ಕಾಲದಲ್ಲಿ ಆಚರಣೆ ಹೆಸರಿನಲ್ಲಿ ಶೋಷಣೆಗಳು ನಡೆಯುತ್ತಿದ್ದವು. ಭ್ರೂಣದಿಂದ ಬೂದಿ ತನಕ ಹೆಣ್ಣು ನಿರಂತರ ಶೋಷಣೆಗೆ ಒಳಗಾಗುತ್ತಿದ್ದ ಕಾಲವೊಂದಿತ್ತು ಇದೀಗ ಹಲವು ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯನ್ನು ಕಾಣುವುದು ಸಂತಸದ ವಿಷಯ ಎಂದರು. ಸಮಾಜದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸುವುದು ಉತ್ತಮ ಕಾರ್ಯ ಎಂದು ಅವರು ಹೇಳಿದರು. ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಮಿಕಾ ಮಹಿಳಾ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷೆ ಜೆ ಫಿಲೋಮಿನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡಿರುವ ವೈದ್ಯೆ ಡಾ.ದೀಪಿಕಾ ಮೂರ್ತಿ, ಉದ್ಯಮಿ ಲಿಪಿಕಾ ನಾಣಯ್ಯ, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಆಶಾ ಕಾರ್ಯಕರ್ತೆ ತಾಲೂಕು ಅಧ್ಯಕ್ಷೆ ಶಾಂತಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಂತಕುಮಾರಿ ಅವರು ಜಲ ದಿನಾಚರಣೆಯ ಮಹತ್ವದ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯದರ್ಶಿ ಪದ್ಮ ವರದಿ ವಾಚನ, ಪಾರ್ವತಿ ಮತ್ತು ತಂಡದಿಂದ ಪ್ರಾರ್ಥನೆ, ಗೌರವಾಧ್ಯಕ್ಷರಾದ ಪದ್ಮಾವತಿ ಪರಮೇಶ್ ಸ್ವಾಗತಿಸಿದರು. ಗೌರವ ಸಲಹೆಗಾರರದ ವನಿತಾ ಚಂದ್ರಮೋಹನ್ ಕಾರ್ಯಕ್ರಮ ನಿರೂಪಣೆ, ಉಪಾಧ್ಯಕ್ಷರಾದ ಜಯಲಕ್ಷ್ಮಿ ವಂದಿಸಿದರು.