


ಮಡಿಕೇರಿ NEWS DESK ಮಾ.23 : ಕೊಡಗು ಪತ್ರಕರ್ತರ ಸಂಘ(ರಿ)ದ ನೂತನ ಆಡಳಿತ ಮಂಡಳಿಯ ಪದಗ್ರಹಣ ಮತ್ತು ಪತ್ರಕರ್ತರ ಸಾಂಸ್ಕೃತಿಕ ಸಂಭ್ರಮ ಸಮಾರಂಭ ಮಡಿಕೇರಿಯಲ್ಲಿ ಸಂಭ್ರಮದಿಂದ ನಡೆಯಿತು. ಮಡಿಕೇರಿ ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಉದ್ಘಾಟಿಸಿದರು. ಸಂಘದ ಸ್ಟಿಕರ್ ನ್ನು ಕೂರ್ಗ್ ಹೊಟೇಲ್ಸ್ ಮತ್ತೆ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಅನಾವರಣಗೊಳಿಸಿದರು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಅವರು ಪ್ರಧಾನ ಭಾಷಣ ಮಾಡಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಎ.ಮುರಳೀಧರ್ ಅವರು ನೂತನ ಅಧ್ಯಕ್ಷ ಅನಿಲ್ ಹೆಚ್.ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಸಂಘದ ಗೌರವ ಸಲಹೆಗಾರರಾದ ಟಿ.ಪಿ.ರಮೇಶ್, ಬಿ.ಜಿ.ಅನಂತಶಯನ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ.ರವಿಕುಮಾರ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್, ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಉಪಸ್ಥಿತರಿದ್ದರು. ವಿಶ್ವದಾಖಲೆ ಮಾಡಿರುವ ಮದೆನಾಡಿನ ಸಿಂಚನಾಳಿಂದ ಯೋಗ ಪ್ರದರ್ಶನ, ವಿಕ್ರಂ ಜಾದೂಗಾರ್ ಅವರಿಂದ ಜಾದೂ ಪ್ರದರ್ಶನ, ಸಂಘದ ಸದಸ್ಯರು ಹಾಗೂ ಕುಟುಂಬ ವರ್ಗದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.