


ಮಡಿಕೇರಿ NEWS DESK ಮಾ.23 : ಸಮಾಜದ ಏಕತೆ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಹಾಗೂ ಫಿಟ್ ಇಂಡಿಯಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮೈಸೂರು, ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಕರೆ ನೀಡಿದ್ದಾರೆ. ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ನೆಸ್‌ಕಫೆ ಕೊಡಗು ಕಪ್ ಹಾಕಿ ಫೈನಲ್ಸ್ ನ್ನು ಉದ್ಘಾಟಿಸಿ ಮಾತನಾಡಿದ ಅವರು ಹಾಕಿ, ಕ್ರಿಕೆಟ್, ಫುಟ್‌ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕೊಡಗು ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದರು. ಜಾತಿ, ಧರ್ಮದ ವ್ಯತ್ಯಾಸವಿಲ್ಲದೆ ಒಗ್ಗಟ್ಟಾಗಿ ಪಾಲ್ಗೊಳ್ಳಬಹುದಾದ ಕ್ರೀಡೆ ಸಮಾಜದ ಒಳಿತು ಮತ್ತು ಏಕತೆಯನ್ನು ಕಾಪಾಡುವ ಅಸ್ತçವಾಗಿದೆ. ಅಲ್ಲದೆ ಆರೋಗ್ಯಕರ ಸಮಾಜದ ನಿರ್ಮಾಣವೂ ಇದರಿಂದ ಸಾಧ್ಯವಾಗಿದೆ. ಭಾರತೀಯ ಹಾಕಿ ತಂಡಕ್ಕೆ ಕೊಡಗು ಜಿಲ್ಲೆ ಅನೇಕ ಕ್ರೀಡಾ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ವಯಂಪ್ರೇರಿತರಾಗಿ ಆಯೋಜಕರು ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಹಾಕಿ ಸೇರಿದಂತೆ ಎಲ್ಲಾ ಕ್ರೀಡಾಕೂಟಗಳನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಕೇಂದ್ರ ಸರ್ಕಾರದ ಮೂಲಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕೇಂದ್ರ ಸರ್ಕಾರ ಕ್ರೀಡಾಪಟುಗಳಿಗೆ ನಿರಂತರ ಪ್ರೋತ್ಸಾಹ ನೀಡುವ ಮೂಲಕ ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾ ಯೋಜನೆಯ ಮೂಲಕ ಬದ್ಧವಾಗಿದೆ. ಪ್ರಧಾನಮಂತ್ರಿಗಳ ಗುರಿಯೂ ಇದೇ ಆಗಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು. ನೆಸ್‌ಕಫೆ ಕೊಡಗು ಕಪ್ ಹಾಕಿ ಉತ್ಸವ ಸಮಿತಿಯ ಪ್ರಮುಖರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.