


ಮಡಿಕೇರಿ NEWS DESK ಮಾ.23 : ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ವತಿಯಿಂದ ಕನ್ನಡ ಭವನದ ಕೊಡಗು ಜಿಲ್ಲಾ ಘಟಕ ಹಾಗೂ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಉದ್ಘಾಟನೆಗೊಂಡಿತು. ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರು ಕನ್ನಡ ಭವನದ ಜಿಲ್ಲಾಧ್ಯಕ್ಷರು ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರೂ ಆಗಿರುವ ಬೊಳ್ಳಜಿರ ಬಿ.ಅಯ್ಯಪ್ಪ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷೆ ಎಂ.ಎ.ರುಬೀನಾ, ಕನ್ನಡ ಭವನದ ಉಪಾಧ್ಯಕ್ಷೆ ತೆನ್ನಿರ ಟೀನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಅವರಿಗೆ ಕನ್ನಡ ಬಾವುಟ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್, ಚುಟುಕು ಪರಿಷತ್ತಿನ ಬೆಳವಣಿಗೆ ಹೇಗೆ ಎಂಬುದು ಪ್ರಶ್ನಾರ್ಥಕವಾಗಿತ್ತು. ಈ ಸಂದರ್ಭದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಸ್ವಂತವಾಗಿ ಸಮಿತಿ ರಚಿಸಿದ್ದು, ಇಂದು ಜಿಲ್ಲಾ ವ್ಯಾಪಿ ಪಸರಿಸುತ್ತಿದೆ ಎಂದರು.
ಇAದು ಕೊಡಗಿನಲ್ಲಿ ಕನ್ನಡ ಭವನ ಮತ್ತು ಚುಟುಕು ಪರಿಷತ್ ಘಟಕ ರಚನೆಯಾಗಿದ್ದು, ಹೊಸ ಆಶಾಭಾವನೆ ಮೂಡಿಸಿದೆ. ಸಾಹಿತ್ಯ ಕ್ಷೇತ್ರದ ಬಗ್ಗೆ ಯುವ ಜನತೆಯಲ್ಲಿ ಆಲಸ್ಯ ಭಾವನೆ ಉಂಟಾಗಿದ್ದು, ಯುವ ಜನತೆ ತಿರುಗಿ ನೋಡದ ಸ್ಥಿತಿಯಲ್ಲಿದೆ. ಯುವ ತಲೆಮಾರು ಮನಸ್ಸು ಮಾಡಿದರೆ ಮಾತ್ರ ಕನ್ನಡ ಸಂಸ್ಕೃತಿಯ ಉಳಿವು ಸಾಧ್ಯ ಎಂದು ಹೇಳಿದರು. ಕೀರ್ತಿ ಸಂಪಾದನೆ ಪ್ರತಿಯೊಬ್ಬರ ಆಸಕ್ತಿ. ಅದು ಸಾಹಿತ್ಯ ಕ್ಷೇತ್ರದಿಂದ ಲಭ್ಯವಾಗಬೇಕಾದರೆ ಹಿರಿಯರು ಕಿರಿಯರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಆ ಮೂಲಕ ಮುಂದಿನ ತಲೆಮಾರು ಸಾಹಿತ್ಯ ಕ್ಷೇತ್ರವನ್ನು ಉಳಿಸಿ ಬೆಳೆಸುವಂತಾಗಬೇಕು. ಆದ್ದರಿಂದ ಯುವ ಜನತೆಯನ್ನು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಸಾಹಿತ್ಯ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ನಿಸ್ವಾರ್ಥ ಸಂಘಟಿತರ ಸಮ್ಮಿಲನವಾದರೆ ಮಾತ್ರ ಕ್ರಿಯಾತ್ಮಕ ಚಟುವಟಿಕೆಗಳು ಸಾಕಾರಗೊಳ್ಳಲು ಸಾಧ್ಯ. ಕನ್ನಡ ಸಂಸ್ಕöÈತಿ ಮತ್ತು ಸಂಸ್ಕಾರವನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಕನ್ನಡವನ್ನು ಎನ್ನಡ ಎನ್ನುವ ಪರಿಸ್ಥಿತಿ ಬರಲು ಸಾಧ್ಯವಿಲ್ಲ ಎಂದು ಡಾ.ವಾಮನ್ ರಾವ್ ಬೇಕಲ್ ಹೇಳಿದರು. ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಉದಯೋನ್ಮುಖ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಮನೆಯಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಬೇಕು. ಆ ಮೂಲಕ ಪುಸ್ತಕ ಜಾಗೃತಿ ಆಗಬೇಕು. ಪುಸ್ತಕಗಳು ಓದುವುದರಿಂದ ಜಾಗೃತಿಯನ್ನು ಮೂಡಿಸುತ್ತದೆ ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ. ಪೋಷಕರು ಆದಷ್ಟು ಮಕ್ಕಳಿಗೆ ಅನುಕೂಲವಾದ ಪುಸ್ತಗಳನ್ನು ಇಡಬೇಕು. ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿದರೆ ಮುಂದಿನ ದಿನಗಳಲ್ಲಿ ಸಾಹಿತ್ಯಸಕ್ತರಾಗುತ್ತಾರೆ ಎಂದರು. ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಗುರುನಮನ, ಸ್ಮರಣೆ, ಸಾಧಕರಿಗೆ ಸನ್ಮಾನ, ಚುಟುಕು, ಸ್ಪರ್ಧೆ, ಅರಿವು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಅವರು ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಕೊಡಗು ಅತ್ಯುನ್ನತ ಸ್ಥಾನದಲ್ಲಿ ನಿಂತಿದೆ. ಮಹಾದಂಡನಾಕನಾಗಿ ಕೊಡಗು ಜಿಲ್ಲೆಯ ಹಿರಿಮೆಯನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಹೆಚ್ಚಿಸಿದ್ದಾರೆ. ಸಾಂಸ್ಕೃತಿಕ, ಕ್ರೀಡೆ, ಸಿನಿಮಾ, ಸಾಮಾಜಿಕ ಕ್ಷೇತ್ರ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಕೊಡಗಿನವರ ಕೊಡುಗೆ ಅಪಾರವಿದ್ದು, ಬರಹಗಾರರ ಸಂಖ್ಯೆಯೂ ಹೆಚ್ಚುತ್ತಿದೆ. ಕನ್ನಡದ ಉಳಿವಿಗೆ ಪಣ ತೊಟ್ಟಿರುವ ನೂತನ ಘಟಕಗಳಿಗೆ ಜಿಲ್ಲೆಯ ಜನತೆ ಸಹಕರಿಸಬೇಕೆಂದು ಕೋರಿದರು. ಹಿರಿಯ ಸಾಹಿತಿ ಭಾರಧ್ವಾಜ್ ಕೆ.ಆನಂದತೀರ್ಥ ಮಾತನಾಡಿ, ಪ್ರಪಂಚದ ಎಲ್ಲಾ ದೇಶಗಳಲ್ಲಿ ಚುಟುಕುಗಳಿವೆ, ಚುಟುಕು ಬರೆಯುವುದು ಸುಲಭದ ಕೆಲಸವಲ್ಲ. ನಾಲ್ಕು ವಾಕ್ಯದಲ್ಲಿರುವ ಚುಟುಕುಗಳು ಸರಳವಾಗಿ ಅರ್ಥಗರ್ಭಿತವಾಗಿರಬೇಕು ಮತ್ತು ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವಂತಿರಬೇಕು. ನೂತನ ಪದಾಧಿಕಾರಿಗಳು ಚುಟುಕುಗಳಿಗೆ ಜೀವ ತುಂಬುವಂತಾಗಲಿ ಎಂದು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಭವನದ ಜಿಲ್ಲಾಧ್ಯಕ್ಷ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಮತ್ತು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಕನ್ನಡ ಸಾಹಿತಿಗಳು, ಸಾಂಸ್ಕöÈತಿಕ ಯಾತ್ರಾರ್ತಿಗಳಿಗೆ ಕನ್ನಡ ಭವನ ಉಚಿತ ವಸತಿ ವ್ಯವಸ್ಥೆ ಒದಗಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕನ್ನಡ ಹಾಗೂ ಸಾಹಿತ್ಯದ ಬೆಳವಣಿಗೆಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಹಿರಿಯ ಸಾಹಿತಿ ನಾಗೇಶ್ ಕಾಲೂರು ಚುಟುಕು ಸಾಹಿತ್ಯದ ವಿಮರ್ಶೆ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಭವನದ ಸ್ಥಾಪಕ ಸಂಚಾಲಕಿ ಸಂಧ್ಯಾರಾಣಿ ಟೀಚರ್, ಕನ್ನಡ ಭವನ ಕೇಂದ್ರ ಸಮಿತಿಯ ಉಪಾಧ್ಯಕ್ಷ ಕೆ.ಪಿ.ರಾಜೇಶ್ ಚಂದ್ರ ಉಪಸ್ಥಿತರಿದ್ದರು. ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷೆ ಎಂ.ಎ.ರುಬೀನಾ ಸ್ವಾಗತಿಸಿ, ಕನ್ನಡ ಭವನದ ನಿರ್ದೇಶಕ ರಂಜಿತ್ ಜಯರಾಂ ಪ್ರಾರ್ಥಿಸಿದರು. ನಿರ್ದೇಶಕಿ ಹರ್ಷಿತಾ ಶೆಟ್ಟಿ ನಿರೂಪಿಸಿದರು, ಕನ್ನಡ ಭವನದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ವಂದಿಸಿದರು. ::: ಪ್ರಶಸ್ತಿ ಪ್ರದಾನ ::: ಕಾಸರಗೋಡಿನ ಕನ್ನಡ ಭವನದ ‘ಕನ್ನಡ ಪಯಸ್ವಿನಿ ಪ್ರಶಸ್ತಿ-2025’ನ್ನು ಬೊಳ್ಳಜಿರ ಬಿ.ಅಯ್ಯಪ್ಪ, ಎಂ.ಎ.ರುಬೀನಾ, ಬಿ.ಜಿ.ಅನಂತಶಯನ, ಭಾರದ್ವಾಜ್ ಕೆ.ಆನಂದತೀರ್ಥ, ನಾಗೇಶ್ ಕಾಲೂರು, ಕೊಟ್ಟುಕತ್ತಿರ ಯಶೋದ ಪ್ರಕಾಶ್, ತೆನ್ನೀರ ಟೀನಾ ಚಂಗಪ್ಪ, ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ಚಂದನ್ ನಂದರಬೆಟ್ಟು, ಬೊಟ್ಟೋಳಂಡ ನಿವ್ಯ ದೇವಯ್ಯ ಹಾಗೂ ಕನ್ನಡ ಭವನದ ‘ಭರವಸೆಯ ಬೆಳಕು’ ಪ್ರಶಸ್ತಿಯನ್ನು ಯೋಗಪಟು ಬಿ.ಕೆ.ಸಿಂಚನ ಅವರಿಗೆ ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ಪಿ.ವಿ.ಪ್ರದೀಪ್ ಕುಮಾರ್, ಜಯಾನಂದ ಪೆರಾಜೆ, ಡಾ.ಶಾಂತ ಪುತ್ತೂರು, ವಿರಾಜ್ ಅಡೂರು, ಡಾ.ಕೊಳ್ಚಪ್ಪೆ ಗೋವಿಂದ ಭಟ್, ರೇಖಾ ಎಸ್.ರಾವ್, ಡಾ.ಹೇಮಂತ್ ಕುಮಾರ್, ಕೆ.ಪಿ.ರಾಜೇಶ್‌ಚಂದ್ರ, ವಸಂತ್ ಕೆರೆಮನೆ ಅವರಿಗೆ ‘ಕೊಡಗು ಜಿಲ್ಲಾ ಸಾಹಿತ್ಯ ಪ್ರಶಸ್ತಿ-2025′ ನೀಡಿ ಗೌರವಿಸಿದರು. ಅಲ್ಲದೆ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರಿಗೆ ‘ಗಡಿನಾಡ ಚೇತನ ವಿಶೇಷ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ::: ಪುಸ್ತಕ ಬಿಡುಗಡೆ ::: ಕಾರ್ಯಕ್ರಮದಲ್ಲಿ ಸಾಹಿತಿ ಅಜ್ಜಿಕುಟ್ಟೀರ ಭವ್ಯ ಬೋಪಣ್ಣ ಅವರ ‘ದೇವನೆಲೆರ ಭೀರ್ಯ’ ಹಾಗೂ ಲೇಖಕಿ ತೆನ್ನಿರ ಟೀನಾ ಚಂಗಪ್ಪ ಅವರ ‘ಮನದಾಳದ ಹೆಜ್ಜೆ’ ಕೃತಿಗಳು ಬಿಡುಗಡೆ ಮಾಡಲಾಯಿತು. ::: ಕವನ ವಾಚನ ::: ಹಿರಿಯ ಕವಿ ನಾಗೇಶ್ ಕಾಲೂರು ಅವರ ಅಧ್ಯಕ್ಷತೆಯಲ್ಲಿ ಚುಟುಕು ಕವಿಗಳು ಕವನ ವಾಚನ ಮಾಡಿದರು. ::: ಪದಗ್ರಹಣ ::: ಕನ್ನಡ ಭವನದ ಜಿಲ್ಲಾಧ್ಯಕ್ಷರು ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರೂ ಆಗಿರುವ ಬೊಳ್ಳಜಿರ ಬಿ.ಅಯ್ಯಪ್ಪ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷೆ ಎಂ.ಎ.ರುಬೀನಾ, ಕನ್ನಡ ಭವನದ ಉಪಾಧ್ಯಕ್ಷೆ ತೆನ್ನಿರ ಟೀನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ಖಜಾಂಚಿ ವಿನೋದ್ ಕುಡ್ತೇಕರ್, ನಿರ್ದೇಶಕರುಗಳಾದ ಅರುಣ್ ಕುಮಾರ್, ಎಸ್.ಎ.ರಿಶಾ, ಹರ್ಷಿತಾ ಶೆಟ್ಟಿ, ಕೆ.ಎಂ.ಸಂಕೇತ್, ಮಾಗಲು ಲೋಹಿತ್, ಲೋಕೇಶ್ ಕಾಟಕೇರಿ, ಎಸ್.ಆರ್.ವತ್ಸಲ, ಪೇರಿಯಂಡ ಜಯಂತಿ ಉತ್ತಪ್ಪ, ಬಿ.ಎನ್.ಚಿತ್ರಾ ಸುಜನ್, ಎಂ.ಎಂ.ಅಬ್ದುಲ್ಲಾ, ವಿಶ್ವ ಕುಂಬೂರು, ಕೆ.ಎಂ.ವಿನೋದ್, ಚುಟುಕು ಸಾಹಿತ್ಯ ಪರಿಷತ್‌ನ ಉಪಾಧ್ಯಕ್ಷೆ ಪೇರಿಯಂಡ ಯಶೋಧ, ಕಾರ್ಯದರ್ಶಿ ಬೊಟ್ಟೋಳಂಡ ನಿವ್ಯಾ ಕಾವೇರಮ್ಮ, ಕಾರ್ಯಕಾರಿಣಿ ಸದಸ್ಯರಾದ ಕರವಂಡ ಸೀಮಾ ಗಣಪತಿ, ಪಳಂಗೀಯಂಡ ಶರತ್ ಬೋಪಣ್ಣ, ಕಿಶೋರ್ ರೈ ಕತ್ತಲೆಕಾಡು, ಕೆ.ಎ.ಸಂಕೇತ್, ಹೇಮಂತ್ ಪಾರೇರ, ಪಂದ್ಯಂಡ ರೇಣುಕಾ ಸೋಮಯ್ಯ, ಅಮ್ಮಾಟಂಡ ವಿಂಧ್ಯಾ ದೇವಯ್ಯ, ಮೊಣ್ಣಂಡ ವಿನು ಕಾರ್ಯಪ್ಪ, ಕಾಣತಂಡ ಭವ್ಯ ದೇವಯ್ಯ, ಉಡುವೆರ ರೇಖಾ ರಘು, ಕೆ.ಎಂ.ವಿನೋದ್ ಪದ ಸ್ವೀಕಾರ ಮಾಡಿದರು.