


ಮಡಿಕೇರಿ NEWS DESK ಮಾ.24 : ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಡಳಿತ ಭವನದ ಸಂಕೀರ್ಣಕ್ಕೆ ಆಧುನಿಕ ತಂತ್ರಜ್ಞಾನದ ನೂತನ ಲಿಫ್ಟ್ ಅಳವಡಿಕೆ ಆಗಲಿದೆ. ಸುಮಾರು 14 ಲಕ್ಷ ರೂ ವೆಚ್ಚದಲ್ಲಿ ಸಂಪೂರ್ಣ ರಸ್ಟ್ ಪ್ರೂಫ್ ಲಿಫ್ಟ್ ಇನ್ನು ಮೂರು ವಾರಗಳ ಒಳಗಾಗಿ ಅಳವಡಿಸಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ನಿರ್ವಹಣೆ ಹೊತ್ತ ಸಂಸ್ಥೆ ಮಾಹಿತಿ ನೀಡಿದೆ. ಜಿಲ್ಲಾಡಳಿತ ಭವನ ಲೋಕಾರ್ಪಣೆ ಗೊಂಡು ಐದು ವರ್ಷಗಳಲ್ಲಿಯೇ ಪದೇ ಪದೇ ರಿಪೇರಿಯಾಗಲು ಆರಂಭಿಸಿತ್ತು. ಕಟ್ಟಡ ನಿರ್ಮಾಣ ಕಾಲದಲ್ಲಿ ಕಾಮಗಾರಿ ವಸ್ತುಗಳನ್ನು ಸಾಗಿಸಲು ಲಿಫ್ಟ್ ಬಳಕೆಯಾದ್ದರಿಂದ ಅದರ ಸಾಮರ್ಥ್ಯ ಕೂಡ ಕುಗ್ಗಿತ್ತು. ಕಳೆದ ಡಿಸೆಂಬರ್ ನಲ್ಲಿ ಸಂಪೂರ್ಣ ಬಂದ್ ಆಗಿತ್ತು. ಕೊಡಗು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರಿಂದ ಸಂಪೂರ್ಣ ಮಾಹಿತಿ ಪಡೆದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು ಅವರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಡಾ ಮಂತರ್ ಗೌಡ ಅವರು ಲಿಫ್ಟ್ ನ್ನು ರಿಪೇರಿ ಮಾಡುವ ಬದಲು ಹೊಸ ಲಿಫ್ಟ್ ಖರೀದಿಗೆ ಸೂಚನೆ ನೀಡಿದ ಮೇರೆಗೆ ದಿನಾಂಕ 31-1-2025 ರಂದು ಜಿಲ್ಲಾಧಿಕಾರಿಗಳು ಟೆಂಡರ್ ಕರೆದು ದಿನಾಂಕ 4-3-2025 ರಂದು ಕಾರ್ಯಾದೇಶವನ್ನು ಲಿಫ್ಟ್ ತಯಾರಿಕೆಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿರುವ ಬೆಂಗಳೂರಿನ ಸ್ವಿಫ್ಟ್ ಸ್ಪೇಸ್ ಎಲಿವೇಟರ್ಸ್ ಸಂಸ್ಥೆಗೆ ನೀಡಲಾಯಿತು. ಹಳೆಯ ಲಿಫ್ಟ್ ನ್ನು ಸ್ಥಳಾಂತರಿಸುವ ಕೆಲಸ ಮುಗಿದಿದ್ದು, ಹೊಸ ಲಿಪ್ಟ್ ಅಳವಡಿಕೆಗೆ ಸಂಸ್ಥೆ ಸಿದ್ದತೆ ನಡೆಸುತ್ತಿದೆ. ಇನ್ನು ಮೂರು ವಾರಗಳಲ್ಲಿ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಲಿದೆ. ಲಿಫ್ಟ್ ಇಲ್ಲದೆ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ವೃದ್ದರು ಮತ್ತು ವಿಶೇಷ ಚೇತನರು ಜಿಲ್ಲಾಡಳಿತ ಭವನದ ಮೂರನೇ ಮಹಡಿ ತಲುಪಲು ಪ್ರಯಾಸ ಪಡುತ್ತಿದ್ದು, ಈಗ ಉಸ್ತುವಾರಿ ಸಚಿವರು, ಕೊಡಗಿನ ಶಾಸಕದ್ವಯರು ಹಾಗೂ ಕೊಡಗು ಜಿಲ್ಲಾಧಿಕಾರಿಗಳ ಕಾಳಜಿಯಿಂದ ನಿಟ್ಟುಸಿರು ಬಿಡುವಂತೆ ಆಗಿದೆ.