


ಮಡಿಕೇರಿ NEWS DESK ಮಾ.24 : ಮುಂದಿನ ದಿನಗಳಲ್ಲಿ ಒಂದೇ ವೇದಿಕೆಯಡಿಯಲ್ಲಿ ಭೂ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಅಧಿಕಾರಿಗಳನ್ನು ಒಳಗೊಂಡ 3 ಸೇನೆಗಳಿಗೆ ಸಂಬಂಧಿಸಿದ ನಿವೃತ್ತ ಯೋಧರ ಕುಂದು ಕೊರತೆಗಳನ್ನು ಆಲಿಸಲು ಶಿಬಿರ ನಡೆಸಲಾಗುತ್ತದೆ ಎಂದು ಭಾರತೀಯ ಭೂ ಸೇನಾ ದಕ್ಷಿಣ ವಲಯದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಧೀರಜ್ ಸೇತ್ ಪಿವಿಎಸ್‌ಎಂ, ಎವಿಎಸ್‌ಎಂ ಭರವಸೆ ನೀಡಿದ್ದಾರೆ. ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆದ ನಿವೃತ್ತ ಸೈನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಕುರಿತು ಸೇನೆಗಳ ಕಮಾಂಡರ್ ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಯೋಜನೆ ರೂಪಿಸಲಾಗುತ್ತದೆ, ಅದು ನಮ್ಮ ಗುರಿಯೂ ಆಗಿದೆ ಎಂದರು. ಕೊಡಗು ಕೇವಲ ಭೌಗೋಳಿಕ ಭೂಮಿಯಲ್ಲ. ಇಲ್ಲಿನ ಪೂರ್ವಿಕರ ವೀರ ಶೌರ್ಯ ಪರಂಪರೆಯಿಂದ ಜನ್ಮ ಪಡೆದ ನಾಡು ಎಂದು ಬಣ್ಣಿಸಿದರು. ದೇಶದ ಬರ‍್ಯಾವ ಪ್ರದೇಶಗಳು ನೀಡದಂತಹ ಕೊಡುಗೆಯನ್ನು ಕೊಡಗು ಜಿಲ್ಲೆ ಭಾರತೀಯ ಸೇನೆಗೆ ನೀಡಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ಮಹಾನ್ ಯೋಧರ ಪರಂಪರೆಗಳು ಜಿಲ್ಲೆಯಲ್ಲಿ ಇಂದಿಗೂ ಕಂಡು ಬರುತ್ತಿದೆ. ಕೊಡಗಿನ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಯ ಕರ್ತವ್ಯದಲ್ಲಿದ್ದರೆ ಸೇನೆಯ ಕ್ಷಮತೆಯೂ ಹೆಚ್ಚಲಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಯುವ ಜನತೆ ಸೇನೆಗೆ ಭರ್ತಿಯಾಗುವ ಮೂಲಕ ಕೊಡಗಿನ ಸೈನಿಕ ಪರಂಪರೆಯನ್ನು ದೇಶದಲ್ಲಿಯೇ ಎತ್ತಿ ಹಿಡಿಯುವಂತಾಬೇಕು ಎಂದು ಆಶಿಸಿದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಭಾರತೀಯ ಭೂ ಸೇನೆ ಕಳೆದ 13 ವರ್ಷಗಳಿಂದ ಜಿಲ್ಲೆಯಲ್ಲಿ ಮಾಜೀ ಸೈನಿಕರ ಕುಂದು ಕೊರೆತೆ ಸಭೆಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು. ಲೆಫ್ಟಿನೆಂಟ್ ಜನರಲ್ ಕರಣ್ ವೀರ್ ಸಿಂಗ್ ಬ್ರಾರ್ ಮಾತನಾಡಿ, ನಿವೃತ್ತ ಯೋಧರು ಮತ್ತವರ ಅವಲಂಬಿತರಿಗೆ ಇಸಿಹೆಚ್‌ಎಸ್ ಮೂಲಕ ಆರೋಗ್ಯ, ಸಿಎಸ್‌ಡಿ ಮೂಲಕ ಕ್ಯಾಂಟೀನ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಜೊತೆಯಲ್ಲಿ ರೂರಲ್ ಇಂಡಿಯಾ ಹೆಲ್ತ್ ಪ್ರಾಜೆಕ್ಟ್, ಲೋಕತಂತ್ರ ದೃಷ್ಟಿ ಆಸ್ಪತ್ರೆ ಯೋಜನೆ ಜಾರಿಗೆ ದೆಹಲಿಯಲ್ಲಿರುವ ಸೇನಾ ಮುಖ್ಯ ಕಚೇರಿಗೆ ಶಿಫಾರಸು ಮಾಡಲಾಗಿದೆ. ಮಡಿಕೇರಿ ಮತ್ತು ವಿರಾಜಪೇಟೆ ಇಸಿಹೆಚ್‌ಎಸ್ ಆಸ್ಪತ್ರೆಗಳಲ್ಲಿ ಶೇ.90ರಷ್ಟು ಅಗತ್ಯ ಔಷಧಗಳು ಲಭ್ಯವಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಇಸಿಹೆಚ್‌ಎಸ್ ಆಸ್ಪತ್ರೆಗೆ ತೆರಳುವ ನಿವೃತ್ತ ಯೋಧರು ಮತ್ತವರ ಅವಲಬಿತರಿಗೆ ಉಳಿದುಕೊಳ್ಳಲು ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು. ಸೇನಾ ನಿವೃತಿಯ ನಂತರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ತೋರಿದ 5 ಮಂದಿಗೆ ಸೇನಾ ಗೌರವದ ಪದಕ ನೀಡಿ ಗೌರವಿಸಲಾಯಿತು. ಪರಿಸರ ರಕ್ಷಣೆಗಾಗಿ ಕರ್ನಲ್ ಸಿ.ಪಿ. ಮುತ್ತಣ್ಣ, ಜನರಲ್ ತಿಮ್ಮಯ್ಯ ಮ್ಯೂಸಿಯಂ ಸ್ಥಾಪನೆಗೆ ಶ್ರಮ ವಹಿಸಿದ ಮೇಜರ್ ಬಿ.ಎ.ನಂಜಪ್ಪ, ಜನರಲ್ ತಿಮ್ಮಯ್ಯ ಮ್ಯೂಸಿಯಂ ಮೇಲ್ವಿಚಾರಕ ಸುಬೇದಾರ್ ಮೇಜರ್ ಜಿ.ಕೆ. ತಿಮ್ಮಯ್ಯ, ಕೊಡಗು ಬಾಕ್ಸಿಂಗ್ ಅಸೋಷಿಯೇಶನ್ ಸ್ಥಾಪನೆಗಾಗಿ ಹವಾಲ್ದಾರ್ ಬಿ.ಕೆ. ಮೇದಪ್ಪ ಅವರ ಪರವಾಗಿ ಅವರ ಪತ್ನಿ ರಾಣಿ ಮೇದಪ್ಪ, ಕೌಶಲ್ಯ ವಿಕಸನ ಶಿಬಿರ ಆಯೋಜನೆಗಾಗಿ ಕ್ರಾಫ್ಟ್ಮೆನ್ ಎಂ.ಕೆ. ಪೊನ್ನಪ್ಪ ಅವರುಗಳು ಲೆಫ್ಟಿನೆಂಟ್ ಜನರಲ್ ಧೀರಜ್ ಸೇತ್ ಅವರಿಂದ ಗೌರವ ಪದಕ ಸ್ವೀಕರಿಸಿದರು. ಕೊಡಗಿನಲ್ಲಿ ನೆಲೆಸಿರುವ ಮಾಜಿ ಯೋಧÀರು, ವೀರನಾರಿಯರು, ಮಾಸಿಕ ಪಿಂಚಣಿ, ಸೇವೆ ಸಲ್ಲಿಸಿದ ದಾಖಲೆಗಳಲ್ಲಿನ ಲೋಪ ದೋಷ, ಪಿಂಚಣಿ ಸಮಸ್ಯೆಗಳನ್ನು ಪರಿಹರಿಸಲು ಸ್ಥಳದಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದವರಿಗೆ, ಅವರವರ ವಿಭಾಗದಲ್ಲಿನ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಭಾರತೀಯ ಸೇನೆಯ 8 ವಿಭಾಗಗಳ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ನಿವೃತ್ತ ಸೈನಿಕರು ಮತ್ತು ಅವರ ಅವಲಂಬಿತರಿಗೆ ಸೇವೆ ಒದಗಿಸಿದರು. ಎ.ಎಸ್.ಸಿ, ಎಂ.ಇ.ಜಿ, ಡಿ.ಎಸ್.ಸಿ, ಇ.ಎಂ.ಇ, ಎಂ.ಆರ್.ಸಿ, ಎ.ಎಂ.ಸಿ, ಸಿಗ್ನಲ್ಸ್, ಅಗ್ನಿ ವೀರ್, ಭೂ ಸೇನಾ ಕೇಂದ್ರಾಲಯದ ಅಧಿಕಾರಿಗಳು ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನಿವೃತ್ತ ಯೋಧರು ಮತ್ತು ಅವರ ಅವಲಂಬಿತರು ಶಿಬಿರದ ಪ್ರಯೋಜನ ಪಡೆದರು. ಕಾರ್ಯಕ್ರಮದಲ್ಲಿ ನಿವೃತ್ತ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ, ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಓ.ಎಸ್. ಚಿಂಗಪ್ಪ, ಪ್ರಮುಖರಾದ ಸುಬೇದಾರ್ ಮೇಜರ್ ವಾಸಪ್ಪ ಅಗರಿಮನೆ, ಹವಾಲ್ದಾರ್ ಕುಟ್ಟಂಡ ನಂದಾ ಮಾದಪ್ಪ(ನಿವೃತ್ತ), ಹವಾಲ್ದಾರ್ ಮಾದೆಯಂಡ ನಾಚಪ್ಪ, ಸುಬೇದಾರ್ ಮೇಜರ್ ನಾಟೋಳಂಡ ಸೋಮಯ್ಯ, ಹವಾಲ್ದಾರ್ ಕೂಪದಿರ ಮುತ್ತಣ್ಣ ಉಪಸ್ಥಿತರಿದ್ದರು.