




ಸುಂಟಿಕೊಪ್ಪ ಮಾ.26 NEWS DESK : ಬಾಳೆಕಾಡು ಚಾಮುಂಡೇಶ್ವರಿ ಮತ್ತು ಮುತ್ತಪ್ಪ ಸೇವಾ ಸಮಿತಿ ವತಿಯಿಂದ 60ನೇ ವರ್ಷದ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದ ವಾರ್ಷಿಕ ಮಹೋತ್ಸವದ ಶೋಭಯಾತ್ರೆ ನಡೆಯಿತು. ದೇವಾಲಯದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಪೈಂಗುತ್ತಿ ಪೂಜೆ, ಅಲಂಕಾರ ಪೂಜೆ ನಡೆಯಿತು. ಬಾಳೆಕಾಡುವಿನ ತೋಟದ ದೇವಾಲಯದಿಂದ ಕೇರಳದ 30 ಅಡಿ ಎತ್ತರದ ಬೃಹತ್ ವಿದ್ಯುತ್ ದೀಪ ಅಲಂಕೃತ ಆಕರ್ಷಣೀಯ ಮಂಟಪ ಮತ್ತು ವೈಭವಯುತ ಮಂಟಪದಲ್ಲಿ ಮುತ್ತಪ್ಪ, ತಿರುವಪ್ಪ ಉತ್ಸವ ಮೂರ್ತಿಯ ಭವ್ಯ ಮೆರವಣಿಯು ಬಾಳೆಕಾಡು ದೇವಾಲಯದಿಂದ ಸುಂಟಿಕೊಪ್ಪ ಪಟ್ಟಣದತ್ತ ಸಾಗಿತು. ವಾದ್ಯಮೇಳ, ಕೇರಳದ ಸಿಂಗಾರಿ ಮೇಳಕ್ಕೆ ಮಕ್ಕಳು, ಮಹಿಳೆಯರು, ಯುವಕರು, ಯುವತಿಯರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಮಿತಿಯ ಸದಸ್ಯರು, ಸಮೂದಾಯ ಬಾಂಧವರು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದರು. ಮೆರವಣಿಗೆಯಲ್ಲಿ ಮುತ್ತಪ್ಪ ಮತ್ತು ತಿರುವಪ್ಪ ದೇವರ ಸ್ತಬ್ಥಚಿತ್ರ ಸೇರಿದಂತೆ ಮೂರು ಕಳಶದ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಸುಂಟಿಕೊಪ್ಪ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ ಕಳಸ ಪೂಜೆ ನಡೆಸಿ ದೇವಾಲಯದಲ್ಲಿ ಹರಕೆ ಸಮರ್ಪಿಸಲಾಯಿತು. ಮಧ್ಯಾಹ್ನ ಬಾಳೆಕಾಡು ತೋಟದ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ನೆರವೇರಿತು. ಸಮಿತಿ ಅಧ್ಯಕ್ಷ ಪ್ರಶಾಂತ್(ಪ್ರಶು), ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಸತೀಶ, ಸಹಕಾರ್ಯದರ್ಶಿ ಪ್ರಕಾಶ್, ಸಹಖಜಾಂಚಿ ವಸಂತ ಸೇರಿದಂತೆ ಪ್ರಮುಖರಾದ ಸಂದೀಪ್, ಸುಧಿ, ಮೋಹನ್, ಪ್ರವೀಣ್, ಅಶೋಕ ಪದಾಧಿಕಾರಿಗಳು, ಬಾಳೆಕಾಡು ತೋಟದ ಕಾರ್ಮಿಕರು, ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.