





ಮಡಿಕೇರಿ ಮಾ.26 NEWS DESK : ಕಾವೇರಿ ಕ್ಷೇತ್ರ ಭಾಗಮಂಡಲದಲ್ಲಿ ವಜ್ರಮಹೋತ್ಸವದ ಹೊಸ್ತಿಲಲ್ಲಿರುವ ಜೀರ್ಣೋದ್ಧಾರಗೊಂಡ ‘ಶ್ರೀ ರಾಮ ಮಂದಿರ’ದ ಪುನರ್ ಪ್ರತಿಷ್ಠೆ ಮತ್ತು ಲೋಕಾರ್ಪಣಾ ಕಾರ್ಯ ಮಾ.29 ರಿಂದ 31ರವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀ ರಾಮ ಮಂದಿರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್ ಜೋಯಪ್ಪ, ಶಿಥಿಲಾವಸ್ಥೆಯಲ್ಲಿದ್ದ ಶ್ರೀ ರಾಮ ಮಂದಿರವನ್ನು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿರುವುದಾಗಿ ಮಾಹಿತಿ ನೀಡಿದರು. 1948ರಲ್ಲಿ ದಾನಿಗಳಾದ ಶ್ರೀನಿವಾಸಯ್ಯ ಮತ್ತು ನರಸಿಂಹ ನಾಯಕ್ ಅವರು ಉದಾರವಾಗಿ ನೀಡಿದ 12 ಸೆಂಟ್ ಜಾಗದಲ್ಲಿ ನಿರ್ಮಿಸಲ್ಪಟ್ಟ ಶ್ರೀ ರಾಮ ಮಂದಿರ, 1952 ರಲ್ಲಿ ಉದ್ಘಾಟನೆಗೊಂಡಿತ್ತು. ಭಾಗಮಂಡಲ ವ್ಯಾಪ್ತಿಯ ಜನರ ಭಜನಾ ಕಾರ್ಯಗಳಿಗೆ ಮೀಸಲಾಗಿದ್ದ ಮಂದಿರ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಇದರ ಜೀಣೋದ್ಧಾರ ಕಾರ್ಯವನ್ನು 2017-18ನೇ ಸಾಲಿನಲ್ಲಿ ಕೈಗೆತ್ತಿಕೊಂಡಿದ್ದು, ಇದೀಗ ಪೂರ್ಣವಾಗಿದೆ. ಮಂದಿರದಲ್ಲಿ ನಿತ್ಯದ ಯಾವುದೇ ಪೂಜಾ ಕಾರ್ಯಗಳು ಇರುವುದಿಲ್ಲ. ಬದಲಾಗಿ ನಿರಂತರವಾಗಿ ವಾರಕ್ಕೊಮ್ಮೆಯಾದರು ಭಜನಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವ ಉದ್ದೇಶ ತಮ್ಮದೆಂದು ತಿಳಿಸಿದರು. ಆರಂಭಿಕ ದಿನವಾದ ಮಾ.29 ರಂದು ಸಂಜೆ 4.30 ರಿಂದ ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ದಿಕ್ಪಾಲಕ ಬಲಿ, ಪ್ರಸಾದ ವಿತರಣೆ ನಡೆಯಲಿದೆ. ಮಾ.30 ರಂದು ಬೆಳಗ್ಗೆ 7 ಕ್ಕೆ ಮಹಾಗಣಪತಿ ಹೋಮ, ವಿಷ್ಣು ಸಹಸ್ರನಾಮ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.
ಲೋಕಾರ್ಪಣೆ :: ಮಾ.31 ರಂದು ಬೆಳಗ್ಗೆ ವಿವಿಧ ಪೂಜಾ ಕಾರ್ಯಗಳ ಬಳಿಕ ಬೆ.9.04 ರ ವೃಷಭ ಲಗ್ನದಲ್ಲಿ ಶ್ರೀ ಸೀತಾರಾಮಚಂದ್ರ ದೇವರ ಪುನರ್ ಪ್ರತಿಷ್ಠೆ, ನೂತನ ರಾಮಮಮದಿರ ಲೋಕಾರ್ಪಣೆ, ಸಾನ್ನಿಧ್ಯ ಕಲಶಾಭಿಷೇಕ, ಶ್ರೀ ರಾಮ ತಾರಕ ಮಂತ್ರ ಯಜ್ಞ ನಡೆಯಲಿದೆಯೆಂದು ಮಾಹಿತಿ ನೀಡಿದರು.
ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ಜಗದ್ಗುರು ಮದ್ವಾಚಾರ್ಯ ಮೂಲ ಮಹಾಸಂಸ್ಥಾನ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಆದಿಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ಸಭೆಯಲ್ಲಿ ಸಂಸದ ಯದುವೀರ್ ಒಡೆಯರ್, ಶಾಸಕ ಎ.ಎಸ್. ಪೊನ್ನಣ್ಣ, ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಮಾಜಿ ಸಂಸದ ಪ್ರತಾಪ ಸಿಂಹ, ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಭಾಗಮಂಡಲ ಕಾಶಿ ಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಗನ್ನಾಥ ಶೆಣೈ, ಭಾಗಮಂಡಲ ಪಂಚಾಯ್ತಿ ಅಧ್ಯಕ್ಷ ಕಾಳನ ರವಿ, ಶ್ರೀ ರಾಮ ಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್, ಶ್ರೀ ರಾಮ ಸೇವಾ ಟ್ರಸ್ಟ್ ಅಧ್ಯಕ್ಷರಾದ ಸಿ.ಆರ್. ಜಯನ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ-ಶೋಭಾ ಯಾತ್ರೆ :: ಮಾ.31ರಿಂದ ರಾಮೋತ್ಸವದ ಏ.6ರವರೆಗೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಏ.6 ರಂದು ಭಾಗಮಂಡಲದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಭವ್ಯ ಶೋಭಾಯಾತ್ರೆಯನ್ನು ಆಯೋಜಿಸಿರುವುದಾಗಿ ಮಾಹಿತಿಯನ್ನಿತ್ತರು. ಗೋಷ್ಠಿಯಲ್ಲಿ ಶ್ರೀ ರಾಮ ಮಂದಿರ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪಿ.ಎಂ.ರಾಜೀವ, ಉಪಾಧ್ಯಕ್ಷ ರವೀಂದ್ರ ಹೆಬ್ಬಾರ್, ಶ್ರೀ ರಾಮ ಸೇವಾ ಟ್ರಸ್ಟ್ ಅಧ್ಯಕ್ಷರಾದ ಸಿ.ಆರ್.ಜಯನ್, ಕಾರ್ಯದರ್ಶಿ ಶಿವಪ್ರಸಾದ್ ಕೂಡಕಂಡಿ, ಮಾಜಿ ಅಧ್ಯಕ್ಷರಾದ ಜೆ.ಎಸ್.ನಂಜುಂಡಪ್ಪ ಉಪಸ್ಥಿತರಿದ್ದರು.