




ಮಡಿಕೇರಿ NEWS DESK ಮಾ.26 : ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ ಮಡಿಕೇರಿ ನಗರದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಬೆಳ್ಳಿ ಹಬ್ಬದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ. ಹಾಕಿ ಪಂದ್ಯಾವಳಿ ನಡೆಯುವ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಕೊಡವ ಕುಟುಂಬಗಳ ದಾಖಲೆಯ 396 ತಂಡಗಳು ನೋಂದಾಯಿಸಿಕೊಂಡಿದ್ದು, ಮಡಿಕೇರಿಯ ಕೇಂದ್ರ ಸ್ಥಾನದಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ಈ ಬಾರಿಯ ವಿಶೇಷ ಎಂದರು. ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ.5 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ 3 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ಸೆಮಿಫೈನಲ್‌ಗೆ ಬಂದ ಎರಡು ತಂಡಗಳಿಗೆ ತಲಾ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಪಂದ್ಯಾವಳಿಯ ಯಶಸ್ಸಿಗೆ ಸರ್ಕಾರದ ಸಂಪೂರ್ಣ ಸಹಕಾರ ಇದ್ದು, ಬೇಡಿಕೆಗಳನ್ನು ಈಡೇರಿಸುವ ಭರವಸೆ ದೊರೆತ್ತಿದೆ. ಜಿಲ್ಲೆಯ ಶಾಸಕದ್ವಯರು ಹಾಗೂ ಸಂಸದರು ಮೊದಲ ದಿನದಿಂದಲೂ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಎಲ್ಲಾ ಕೊಡವ ಸಮಾಜಗಳು ಹಾಗೂ ಕೊಡವ ಕೇರಿಗಳ ಸಹಕಾರವನ್ನು ಪಡೆಯಲಾಗಿದ್ದು, ಹಾಕಿ ಉತ್ಸವ ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. :: ಕ್ರೀಡಾ ಜ್ಯೋತಿ :: ಕೊಡವ ಹಾಕಿ ಉತ್ಸವದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್’ಮನೆಯಲ್ಲಿ ಮುದ್ದಂಡ ಹಾಕಿ ಉತ್ಸವದ ಕ್ರೀಡಾಜ್ಯೋತಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಕೊಡವ ಹಾಕಿ ಹಬ್ಬದ ಜನಕ ದಿ.ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಲೀಲ ಕುಟ್ಟಪ್ಪ ಉದ್ಘಾಟಿಸಿದ್ದು, ಇದುವರೆಗೆ ಹಾಕಿ ಉತ್ಸವ ಆಯೋಜಿಸಿದ್ದ 24 ಕುಟುಂಬಗಳನ್ನು ಸ್ಮರಿಸುವ ಮತ್ತು ಗೌರವದಿಂದ ಕಾಣುವ ಉದ್ದೇಶದಿಂದ ಎಲ್ಲಾ ಐನ್’ಮನೆಗಳಿಗೆ ಮ್ಯಾರಥಾನ್ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯುತ್ತಿರುವುದು ಈ ಬಾರಿಯ ವಿಶೇಷ. ಈಗಾಗಲೇ ಪಾಂಡಂಡ ಕುಟುಂಬದ ಐನ್ ಮನೆಯ ನಂತರ ಕಿರುಗೂರು ಚೆಪ್ಪುಡಿರ, ಅಲಮೇಂಗಡ, ಟಿ.ಶೆಟ್ಟಿಗೇರಿ- ಒಂಟಿಯಂಗಡಿ ಮಚ್ಚಮಾಡ, ಚೆಕ್ಕೇರ, ಕಳ್ಳಿಚಂಡ, ಕುಂದ ಮನೆಯಪಂಡ, ನಾಂಗಾಲ ಕುಪ್ಪಂಡ, ವಿರಾಜಪೇಟೆ ಕಾವಾಡಿ ನೆಲ್ಲಮಕ್ಕಡ, ಚೆಂಬೆಬೆಳ್ಳೂರು ಈಶ್ವರ ದೇವಾಲಯ, ಮಂಡೇಪಂಡ, ಕುಕ್ಲೂರು ತಾತಂಡ, ವಿರಾಜಪೇಟೆ ಕೊಡವ ಸಮಾಜ, ಅರಮೇರಿ ಮುದ್ದಂಡ, ಐಚೆಟ್ಟಿರ, ಕಾಕೋಟುಪರಂಬು ಮಂಡೇಟಿರ, ಬಲ್ಲಚಂಡ, ಕರಡ ಕೋಡಿರ, ಬಾವಲಿ ಬಿದ್ದಂಡ ಐನ್ ಮನೆಗಳಿಗೆ ಕೊಡಗಿನ ಮ್ಯಾರಥಾನ್ ಪಟುಗಳು ಕ್ರೀಡಾಜ್ಯೋತಿಯೊಂದಿಗೆ ಸಾಗಿದ್ದು, ಗೌರವ ಸಲ್ಲಿಸಲಾಗಿದೆ ಎಂದು ಹೇಳಿದರು. ಮಾ.27ರಂದು ಬಾವಲಿ ಮಾದಂಡ, ಕಲಿಯಂಡ, ನೆಲ್ಜಿ ಮಾಳೆಯಂಡ, ಅಪ್ಪಚೆಟ್ಟೋಳಂಡ, ನಾಪೋಕ್ಲು ಕುಲ್ಲೇಟಿರ, ಬಿದ್ದಾಟಂಡ, ಕೊಳಕೇರಿ ಕುಂಡ್ಯೋಳಂಡ, ಮಡಿಕೇರಿ ಶಾಂತೆಯಂಡ ಮೂಲಕ ಮಾ.28ರಂದು ಜನರಲ್ ತಿಮ್ಮಯ್ಯ ವೃತ್ತ ತಲುಪಲಿದೆ. ನಂತರ ಬೆಳಿಗ್ಗೆ 9ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನಕ್ಕೆ ಬೃಹತ್ ಮೆರವಣಿಗೆಯ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುವುದು. ಉದ್ಘಾಟನಾ ಸಮಾರಂಭದ ಪ್ರಯುಕ್ತ ಪ್ರದರ್ಶನ ಪಂದ್ಯ ಮಧ್ಯಾಹ್ನ 12.30 ಗಂಟೆಗೆ ಕೊಡಗು ಜಿಲ್ಲಾಡಳಿತ ಹಾಗೂ ಆಯೋಜಕ ಕುಟುಂಬ ಮತ್ತು ಕೊಡವ ಹಾಕಿ ಅಕಾಡೆಮಿ X1 ಹಾಗೂ ಕರ್ನಾಟಕ X1 ತಂಡದ ನಡುವೆ ನಡೆಯಲಿದೆ ಎಂದು ರಶಿನ್ ಸುಬ್ಬಯ್ಯ ತಿಳಿಸಿದರು. ಸೈಕ್ಲೋಥಾನ್ :: ಏ.26 ರಂದು ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವರೆಗೆ ಸುಮಾರು 83 ಕಿ.ಮೀ ನ ಸೈಕ್ಲೋಥಾನ್ ನಡೆಯಲಿದೆ. ಇದಕ್ಕೆ ಅಂತರಾಷ್ಟ್ರೀಯ ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ವಿವಿಧ ವಿಭಾಗದಲ್ಲಿ ಬಹುಮಾನ ನೀಡಲಾಗುವುದು. ಮೈದಾನದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ನಿರ್ಮಾಣ ಮಾಡಲಾಗಿದ್ದು, 35 ಪುಡ್ ಸ್ಟಾಲ್‌ಗಳು ಇರಲಿದೆ ಎಂದು ಹೇಳಿದರು. ::: ಮಹಿಳಾ ಹಾಕಿ ಸಂಭ್ರಮ ::: ಬೆಳ್ಳಿಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮುದ್ದಂಡ ಹಾಕಿ ಉತ್ಸವದಲ್ಲಿ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈಗಾಗಲೇ 40 ತಂಡಗಳು ನೋಂದಾಯಿಸಿಕೊಂಡಿವೆ. ನೋಂದಣಿಯ ಕೊನೆಯ ದಿನಾಂಕ ಏ.10 ಆಗಿರುವುದರಿಂದ ಮತ್ತಷ್ಟು ತಂಡಗಳು ಸೇರ್ಪಡೆಗೊಳ್ಳಲಿವೆ. ಮೂರನೇ ಮೈದಾನದಲ್ಲಿ ಮಹಿಳಾ ಹಾಕಿ ಪಂದ್ಯಾವಳಿ ನಡೆಯಲಿದೆ ಎಂದರು. ಪಂದ್ಯಾವಳಿಯ ವಿಜೇತರಿಗೆ ರೂ.2 ಲಕ್ಷ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 1 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಸೆಮಿಫೈನಲ್ ಸಂದರ್ಭ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಲಾಲ್ ರಿಮ್ ಸಿಯಾಮಿ ಅವರು ಆಗಮಿಸಿದ ಹಾಕಿ ಕ್ರೀಡೆಯ ಕುರಿತು ಮಾಹಿತಿ ನೀಡಲಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹಾಗೂ ಒಲಂಪಿಯನ್ ಮನ್ ಪ್ರೀತ್ ಸಿಂಗ್ ಕೂಡ ಪಂದ್ಯಾವಳಿಯ ಸಂದರ್ಭ ಪಾಲ್ಗೊಳ್ಳಲಿದ್ದಾರೆ. ಸೆಮಿ ಫೈನಲ್ ಪಂದ್ಯಾವಳಿಗೆ ಹಿರಿಯ ರಾಜಕರಣಿ ಅಜಯ್ ಮಕೆನ್ ಆಗಮಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಮಾ.28 ರಂದು ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಹಾಕಿ ಉತ್ಸವ ಉದ್ಘಾಟನೆಗೊಳ್ಳಲಿದೆ. ಅಂದು ಬೆಳಿಗ್ಗೆ 9.45ಗಂಟೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದವರೆಗೆ ಕೊಡವ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ನಂತರ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಅರ್ಜುನ ಪ್ರಶಸ್ತಿ ವಿಜೇತ ಒಲಂಪಿಯನ್ ಅಂಜಪರವಂಡ ಬಿ.ಸುಬ್ಬಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಅಶೋಕ್ ಸಂಗಪ್ಪ ಆಲೂರ, ಮಾಜಿ ಶಾಸಕರುಗಳಾದ ಮಂಡೇಪಂಡ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಮಂಡೇಪಂಡ ಸುನಿಲ್ ಸುಬ್ರಮಣಿ ಹಾಗೂ ಚೆಪ್ಪುಡಿರ ಅರುಣ್ ಮಾಚಯ್ಯ ಪಾಲ್ಗೊಳ್ಳಲಿದ್ದಾರೆ. ಮುದ್ದಂಡ ಕುಟುಂಬದ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಹಾಗೂ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಉಪಸ್ಥಿತರಿರುವರು. ಮುದ್ದಂಡ ಹಾಕಿ ಹಬ್ಬದ ಉಪಾಧ್ಯಕ್ಷ ಡೀನ್ ಬೋಪಣ್ಣ ಮಾತನಾಡಿ, ಪಂದ್ಯಾವಳಿ ವೀಕ್ಷಣೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ ಅವರ ಅನುದಾನದಲ್ಲಿ 1,500 ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ದಿಲೀಪ್ ನಾಚಪ್ಪ ಹಾಗೂ ಯಲದಾಳು ಮನೋಜ್ ಬೋಪಯ್ಯ ಅವರ ಜಾಗದಲ್ಲಿ 1,000 ವಾಹನದ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 2,500 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಮುದ್ದಂಡ ಒಕ್ಕದ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಮಾತನಾಡಿ, ಮುದ್ದಂಡ ಕಪ್ ಹಾಕಿ ಉತ್ಸವವು ಜಿಲ್ಲೆಯಲ್ಲಿ ದಸರಾ ಹಬ್ಬದಂತೆ ನಡೆಯಲಿದ್ದು, ಕೊಡವ ಜನಾಂಗ ಹಾಗೂ ಕೊಡವೇತರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು. ಮುದ್ದಂಡ ಹಾಕಿ ಹಬ್ಬದ ಕಾರ್ಯದರ್ಶಿ ಆದ್ಯ ಪೂವಣ್ಣ ಉಪಸ್ಥಿತರಿದ್ದರು.