




ಮಡಿಕೇರಿ ಮಾ.27 NEWS DESK : ಐತಿಹಾಸಿಕ ಹಿನ್ನಲೆಯನ್ನು ಒಳಗೊಂಡ ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದ ಪುರಾತನ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವ ವಿಶೇಷ ಪೂಜಾ ಕಾರ್ಯ, ತೆರೆಗಳ ದರ್ಶನ, ದೇವರ ಅವಭೃತ ಸ್ನಾನ ಮತ್ತು ನೃತ್ಯ ಬಲಿಯೊಂದಿಗೆ ಶ್ರದ್ಧಾ ಭಕ್ತಿಯಿಂದ ಬುಧವಾರ ಸಂಪನ್ನಗೊಂಡಿತು. ಇದೇ ಮಾ.22 ರಂದು ಮಹಾಗಣಪತಿ ಹೋಮದೊಂದಿಗೆ ಆರಂಭಗೊಂಡ ಉತ್ಸವದಲ್ಲಿ ತಕ್ಕರ ಮನೆಯಿಂದ ಭಂಡಾರ ತರುವದು, ಅಂದಿ ಬೆಳಕು, ದೇವರ ನೃತ್ಯ ಬಲಿ, ಶ್ರೀ ಪರದೇವರ ಕೋಟದಲ್ಲಿ ಕೊಟ್ಟಿ ಪಾಡುವ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೇವತಾ ಕಾರ್ಯಗಳು ತಂತ್ರಿಗಳಾದ ಉದಯ ಕುಮಾರ್ ಹುಲಿತಾಳ ಅವರ ನೇತೃತ್ವದಲ್ಲಿ, ಕುಮಾರ್, ಪ್ರಶಾಂತ್ ಬಟ್ಟೆಮಕ್ಕಿ ಅವರುಗಳ ಸಹಕಾರದೊಂದಿಗೆ ನಡೆಯಿತು. ಉತ್ಸವದ ನಾಲ್ಕನೇ ದಿನವಾದ ಮಂಗಳವಾರದ ದೊಡ್ಡ ಹಬ್ಬದಂದು ಬೆಳಗ್ಗೆ ದೇವರ ನೃತ್ಯ ಬಲಿ, ಶ್ರೀ ಪರದೇವರ ಕೋಟದಿಂದ ದೇವರ ಮುಡಿ ಮಲಿಯಪಟ್ಟಿಗೆ ಬರುವುದು, ಶೀ ಅಯ್ಯಪ್ಪ ದೇವರ ಭಂಡಾರ ತರುವುದು, ಎತ್ತು ಪೋರಾಟ, ಹಬ್ಬದ ಕಟ್ಟು ಮುರಿಯುವುದು, ತೆಂಗೆಪೋರು, ಬೆಳಕು, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನದ ಬಳಿಕ ದೇವರ ಪ್ರದಕ್ಷಿಣೆ ನೃತ್ಯ ಬಲಿ ನಡೆದು, ಶೀ ಪರದೇವರ, ಶ್ರೀ ಅಯ್ಯಪ್ಪ ದೇವರ, ಕುಟ್ಟಿಚಾತ ದೇವರ ತೆರೆ ಕಾರ್ಯಕ್ರಮ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. ಬುಧವಾರ ಸಂಜೆ ಬೆಳಕು, ದೇವರು ಬಲಿ ಬರುವುದು, ದೇವರ ಜಳಕ, ದೇವರ ನೃತ್ಯ ಬಲಿ, ಅನ್ನಸಂತರ್ಪಣೆ ಮತ್ತು ಮಂತ್ರಾಕ್ಷತೆ ಕಾರ್ಯಗಳೊಂದಿಗೆ ಉತ್ಸವ ಸಂಪನ್ನಗೊಂಡಿತು. ಉತ್ಸವದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.