




ಮಡಿಕೇರಿ ಮಾ.28 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿ.ಬಾಡಗ ಗ್ರಾಮದ ಕೊಕ್ಕ ಎಂಬಲ್ಲಿ ನೂತನವಾಗಿ ವಿದ್ಯುತ್ ಪರಿವರ್ತಕ ಘಟಕ ಉದ್ಘಾಟಿಸಿದರು. ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ವಿ.ಬಾಡಗದ ಮುಖ್ಯ ರಸ್ತೆಯಿಂದ ಪಡವಟ್ಟು-ಪೆಗ್ಗರೆಮಾಡು ಈಶ್ವರ ಅಂಬಾಲಕ್ಕಾಗಿ, ಕೋಲತಂಡ ಹಾಗೂ ಮುಲ್ಲೆಂಗಡ ಕುಟುಂಬಸ್ಥರ ಭಾಗಕ್ಕೆ ಹೋಗುವ ರಸ್ತೆಯ ಅಭಿವೃದ್ಧಿ ಕಾಮಗಾರಿ, ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯ ಪೆರುಂಬಾಡಿ-ಬಿಟ್ಟಂಗಾಲ ಭಾಗದ ಸುಮಾರು 3-80 ರಿಂದ 5-10ರ ಕಿಲೋಮೀಟರ್ ರಸ್ತೆಯ ಅಭಿವೃದ್ಧಿ ಕಾಮಗಾರಿ, ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನ್ವರುದ್ದ ಮಸೀದಿ ಹಾಗೂ ಚರ್ಚೆಗೆ ಸಂಬಂಧ ಪಟ್ಟ ಕೃಷಿ ಜಮೀನಿನ ಬಳಿ ಹರಿಯುತ್ತಿರುವ ನದಿಗೆ ಸಂರಕ್ಷಣೆ ಹಾಗು ಜಮೀನಿಗೆ ಹಾನಿಯಾಗದಂತೆ ತಡೆಗೋಡೆ ನಿರ್ಮಾಣ ಕಾಮಗಾರಿ, ಹೆಗ್ಗಳ ಹಾಗೂ ಬೇಟೋಳಿ ಗ್ರಾಮಗಳ ಹಲವು ಭಾಗಗಳಲ್ಲಿ, ಮಳೆಗಾಲದಲ್ಲಿ ನದಿಯಲ್ಲಿ ಹರಿಯುವ ರಭಸದ ನೀರಿನಿಂದಾಗಿ ಆಗುವ ಕೃಷಿ ಭೂಮಿ ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ವಿಶೇಷ ಅನುದಾನದಲ್ಲಿ ಕೃಷಿ ಜಮಿನಿಗಳಿಗೆ ಹಾನಿಯಾಗದಂತೆ ತಡೆಗೋಡೆ, ಗುಹ್ಯ ಗ್ರಾಮದ ಬಳಿ ಹರಿಯುತ್ತಿರುವ ಕಾವೇರಿ ನದಿ ದಂಡೆಯಲ್ಲಿರುವ ಕೃಷಿ ಜಮೀನುಗಳ ರಕ್ಷಣೆಗಾಗಿ ತಡೆಗೋಡೆ ನಿರ್ಮಾಣ ಕಾಮಗಾರಿ, ಕದನೂರು ಗ್ರಾಮ ಪಂಚಾಯಿತಿಯ ಮೈತಾಡಿ ಮತ್ತು ಅರಮೇರಿ ಭಾಗದ ಬಾಳಿಕುಟೀರಕ್ಕೆ ಸಂಬಂಧಿಸಿದ, ಕೃಷಿ ಜಮೀನಿನ ಹತ್ತಿರ ಹರಿಯುವ ನದಿಗೆ ಸಂರಕ್ಷಣೆ ಒದಗಿಸಲು ಹಾಗೂ ಪಕ್ಕದ ಕೃಷಿ ಭೂಮಿಗಳಿಗೆ ತೊಂದರೆಯಾಗದಂತೆ ತಡೆಗೋಡೆ ನಿರ್ಮಾಣ ಮಾಡುವ ಕಾಮಗಾರಿ, ಮೇಚಮಾಡ ಕುಟುಂಬಸ್ಥರ ಜಮೀನಿನ ಬಳಿ ಮಳೆಯಿಂದಾಗಿ ಹಾನಿಯಾದ ಭಾಗಗಳಲ್ಲಿ ತಡೆಗೋಡೆ ನಿರ್ಮಿಸಲು ಮಂಜೂರಾದ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕರು ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರೈಸಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಬೇಕೆಂದು ಸೂಚಿಸಿದರು.
ತ್ಯಾಜ್ಯ ಘಟಕಕ್ಕೆ ಭೇಟಿ :: ವಿರಾಜಪೇಟೆ ತಾಲ್ಲೂಕಿ ಪೆರುಂಬಾಡಿಯಲ್ಲಿರುವ ಘನತಾಜ್ಯ ವಿಲೇವಾರಿ ಘಟಕದ ಹಲವು ನ್ಯೂನ್ಯತೆಗಳ ಬಗ್ಗೆ ಈ ಹಿಂದೆ ಶಾಸಕರಿಗೆ ದೂರು ಬಂದ ಹಿನ್ನೆಲೆಯಲ್ಲಿ ಶಾಸಕರು ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅಧಿಕಾರಿಗಳಿಂದ ಹಾಗೂ ಸ್ಥಳೀಯರಿಂದ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣ್ಣಚ್ಚ, ಪುರಸಭಾ ಅಧ್ಯಕ್ಷ ದೇಚಮ್ಮ ಕಾಳಪ್ಪ, ಪುರಸಭಾ ಸದಸ್ಯರು ಅಧಿಕಾರಿಗಳು ಹಾಗೂ ಸ್ಥಳೀಯರು ಹಾಜರಿದ್ದರು.