





ಮಡಿಕೇರಿ ಮಾ.29 NEWS DESK : ಕೊಡವ ಕೌಟುಂಬಿಕ ‘ಮುದ್ದಂಡ ಕಪ್ ಹಾಕಿ ನಮ್ಮೆ’ಯ ಉದ್ಘಾಟನಾ ಸಮಾರಂಭದ ಆಕರ್ಷಕ ಪ್ರದರ್ಶನ ಪಂದ್ಯಗಳಲ್ಲಿ ಹಾಕಿ ಉತ್ಸವದ ಆಯೋಜಕ ತಂಡ ಮತ್ತು ಕೊಡವ ಹಾಕಿ ಅಕಾಡೆಮಿ ಇಲೆವೆನ್ ತಂಡಗಳು ಸೊಗಸಾದ ಆಟದ ಮೂಲಕ ಗೆಲುವು ಸಾಧಿಸಿದವು. ಪಂದ್ಯಾವಳಿ ಆಯೋಜಕ ತಂಡವು ಮೊದಲ ಪ್ರದರ್ಶನ ಪಂದ್ಯದಲ್ಲಿ ಕೊಡಗು ಜಿಲ್ಲಾಡಳಿತ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿತು. ವಿಜೇತ ತಂಡದ ಪರವಾಗಿ ಅಮ್ಮುಣಿಚಂಡ ವಿಘ್ನೇಶ್ ಬೋಪಣ್ಣ, ಮುದ್ದಂಡ ಆದ್ಯ ಪೂವಣ್ಣ ಹಾಗೂ ನೆಲ್ಲಮಕ್ಕಡ ಚಂಗಪ್ಪ ತಲಾ 1 ಗೋಲು ಸಿಡಿಸಿ ಗಮನ ಸೆಳೆದರು. ದ್ವಿತೀಯ ಪ್ರದರ್ಶನ ಪಂದ್ಯದಲ್ಲಿ ಕೊಡವ ಹಾಕಿ ಅಕಾಡೆಮಿ ಇಲೆವೆನ್ ತಂಡ 3-0 ಗೋಲುಗಳ ಅಂತರದಿಂದ ಕರ್ನಾಟಕ ಇಲೆವೆನ್ ತಂಡವನ್ನು ಪರಾಭವಗೊಳಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪಂದ್ಯಗಳ ವೀಕ್ಷಕ ವಿವರಣೆಯನ್ನು ಚೆಪ್ಪುಡಿರ ಕಾರ್ಯಪ್ಪ ಹಾಗೂ ಮಾಳೇಟಿರ ಶ್ರೀನಿವಾಸ್ ನೀಡಿದರು.