





ಮಡಿಕೇರಿ ಮಾ.29 NEWS DESK : ತಿಗಳ ಸಮಾಜದ ಮೂಲಪುರುಷ ಶ್ರೀ ಅಗ್ನಿಬನ್ನಿರಾಯ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವಂತಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಗ್ನಿ ಬನ್ನಿರಾಯರಂತಹ ಮಹಾನ್ ಚೇತನಗಳ ಜೀವನಾದರ್ಶಗಳು ಮನುಕುಲದ ಹಾದಿಗೆ ಬೆಳಕಾಗಿದೆ ಎಂದು ಮಂಜುಳ ನುಡಿದರು. ಬೆಂಗಳೂರಿನ ಲಾಲ್ಬಾಗ್ ನಿರ್ಮಾಣಕ್ಕೆ ತಿಗಳ ಸಮಾಜ ಮೂಲ ಕಾರಣಕರ್ತರಾಗಿದ್ದಾರೆ. ತಿಗಳ ಸಮಾಜವು ಬೆಂಗಳೂರು, ತುಮಕೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು. ಪುರಾಣ, ಐತಿಹ್ಯಗಳಲ್ಲಿ ಅಗ್ನಿಬನ್ನಿರಾಯ ಸ್ವಾಮಿ ಅವರ ಬಗ್ಗೆ ಉಲ್ಲೇಖವಿದ್ದು, ಸಮಾಜದಲ್ಲಿ ಶಾಂತಿ, ನೆಮ್ಮದಿಗೆ ಹಲವು ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪಿ.ಪಿ.ಕವಿತ ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬರೂ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಆ ನಿಟ್ಟಿನಲ್ಲಿ ಸರ್ಕಾರ ವಿವಿಧ ಜಯಂತಿಗಳನ್ನು ಆಚರಿಸುತ್ತಿದ್ದು, ಎಲ್ಲರೂ ಜಾಗೃತರಾಗಬೇಕು ಎಂದು ಅವರು ತಿಳಿಸಿದರು. ‘ನಾಗರಿಕ ಸೇವಾ ಪರೀಕ್ಷೆಗೆ ತಯಾರಾಗಲು ಸರ್ಕಾರ ವಿದ್ಯಾರ್ಥಿಗಳಿಗೆ ಜಿಲ್ಲೆಗೆ ಸುಮಾರು 25 ಲಕ್ಷ ರೂ. ವೆಚ್ಚದ ಪುಸ್ತಕವನ್ನು ಒದಗಿಸಿದ್ದು, ಈ ಪುಸ್ತಕಗಳನ್ನು ಜಿಲ್ಲೆಯ 21 ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ತಲಾ 170 ಪುಸ್ತಕ ಪೂರೈಕೆ ಮಾಡಲಾಗುತ್ತದೆ ಎಂದು ಪಿ.ಪಿ.ಕವಿತ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.’ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯ ಸೌಲಭ್ಯ ಪಡೆದು, ಉನ್ನತ ವ್ಯಾಸಂಗ ಮಾಡಿ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದರು. ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಎಚ್.ಜಿ.ಕುಮಾರ್ ಮಾತನಾಡಿ, ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಅವರ ಬದುಕಿನ ಕಾಲಾವಧಿಯಲ್ಲಿ ದುಷ್ಟರ ಅಟ್ಟಹಾಸ ನಿಯಂತ್ರಿಸುವಲ್ಲಿ ಅಗ್ನಿಬನ್ನಿರಾಯರ ಕೊಡುಗೆ ಹೆಚ್ಚಿನದ್ದಾಗಿದೆ. ಇವರೊಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಹಲವು ದಶಕಗಳಿಂದ ಆಚರಿಸಿಕೊಂಡು ಬಂದಿರುವ ಕರಗ ಉತ್ಸವಕ್ಕೆ ತಿಗಳ ಸಮಾಜದವರ ಕೊಡುಗೆ ಅಪಾರವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಬ್ಲಾಸಂ ಶಾಲೆಯ ಶಿಕ್ಷಕರಾದ ಮಂಗಳಗೌರಿ ಅವರು ಮಾತನಾಡಿ ಅಗ್ನಿಬನ್ನಿರಾಯ ಸೇರಿದಂತೆ ಮಹಾನ್ ಪುರುಷರು ಮತ್ತು ಆದರ್ಶ ಮಹಿಳೆಯರನ್ನು ಪ್ರತಿಯೊಬ್ಬರೂ ಸ್ಮರಿಸುವಂತಾಗಬೇಕು ಎಂದು ಸಲಹೆ ಮಾಡಿದರು. ನಿವೃತ್ತ ಶಿಕ್ಷಕರಾದ ಬಿ.ಸಿ.ಶಂಕರಯ್ಯ, ಕಲಾವಿದ ಈ.ರಾಜು ಮಾತನಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.