




































ಮಡಿಕೇರಿ NEWS DESK ಏ.1 : ಕೊಡಗಿನ ಪುರಾತನ ದೇವಾಲಯಗಳಲ್ಲಿ ಒಂದಾದ ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ 14 ದೇವಾನು ದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವವು ಏ.2 ರಿಂದ 5ರ ವರೆಗೆ ಜರುಗಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಷ್ಠಿಯಲ್ಲಿ ಮಾತನಾಡಿದ ಅವರು, ಏ.2 ರಂದು ಸಂಜೆ 6.30 ರಿಂದ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುನ್ನತ್ತಿಲ್ಲತ್ ಮುರಳಿಕೃಷ್ಣ ನಂಬೂದರಿ ಹಾಗೂ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ನಾಲ್ಕುದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ಜರುಗಲಿದೆ ಎಂದು ತಿಳಿಸಿದರು. ಏ.2 ರಂದು ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಅಂಗವಾಗಿ ಸಂಜೆ 6.30 ರಿಂದ ಶ್ರೀ ಭಗವತಿ ಪೂಜೆ, ಕಳಸ ಪೂಜೆ, ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ವಲಿ, ವಾಸ್ತು ಪೂಜೆ, ವಾಸ್ತು ಕಲಶಾಭಿಷೇಕ, ವಾಸ್ತು ಬಲಿ, ವಾಸ್ತು ಪುಣ್ಯಾಹ, ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಏ. ರಂದು ಬೆಳಿಗ್ಗೆ ಏ.3 ರಂದು ಬೆಳಿಗ್ಗೆ 7.00 ಗಂಟೆಗೆ ಗಣಪತಿ ಹೋಮ, 9 ಗಂಟೆಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಠಾಭಿಷೇಕ, 10 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, 11 ಗಂಟೆಗೆ ಶ್ರೀ ನಾಗದೇವರಿಗೆ ತಂಬೀಲ ಸಮರ್ಪಣೆ, 11.30 ಗಂಟೆಗೆ ಕಲಶಾಭಿಷೇಕ ಮತ್ತು 12.00 ಗಂಟೆಗೆ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ನಡೆಯಲಿದೆ ಜರುಗಲಿದೆ. ಅದೇ ದಿನ ಸಂಜೆ 4 ಗಂಟೆಗೆ ಧ್ವಜಾರೋಹಣದೊಂದಿಗೆ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ. ಧ್ವಜಾರೋಹಣವನ್ನು ಪರಶಿನಿ ಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಮುಖ್ಯ ಅರ್ಚಕರಾಗಿರುವ (ಆಚರಪಟ್ಟ ಮಡೆಯಚ್ಚನ್) ಶ್ರೀ ಬ್ಲಾತೂರ್ ಚಂದ್ರ ಮಡೆಯಚ್ಚನ್ ಅವರ ನೇತೃತ್ವದಲ್ಲಿ ನಾಡಿನ ಸರ್ವ ಭಕ್ತರ ಆಶ್ರಯದಲ್ಲಿ, ಹಲವಾರು ಅತಿಥಿಗಣ್ಯರೊಂದಿಗೆ ದೈವತಾ ಕಾರ್ಯ ಪ್ರಾರಂಭವಾಗಲಿದೆ ಎಂದರು. ಸಂಜೆ 4.15 ಗಂಟೆಗೆ ದೇವಾಲಯದ ಮುಂಭಾಗದಲ್ಲಿ ಹೊಸದಾಗಿ ನಿರ್ಮಿಸಿರುವ ‘ಸೇವಾ ಕೌಂಟರ್’ನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, 4.30ಕ್ಕೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, 5.30ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ (ತೆರೆ) ನಡೆಯಲಿದೆ. 6.30 ಗಂಟೆಗೆ ಶ್ರೀ ಭಗವತಿ ದೇವಿಗೆ ದೀಪಾರಾಧನೆ ಮತ್ತು ಪುಷ್ಪಾರ್ಚನೆ ನಡೆಯಲಿದೆ. 7.30 ಗಂಟೆಗೆ ಹರಕೆ ಕೋಲ ನಡೆಸಿಕೊಡಲಾಗುವುದು. (ಶ್ರೀ ವಿಷ್ಣು ಮೂರ್ತಿ, ಶಿವಭೂತಂ, ಶ್ರೀ ಪೋದಿ, ಶ್ರೀ ಕುಟ್ಟಿಚಾತನ್ ದೈವದ ಕೋಲಗಳನ್ನು ಕಟ್ಟಿಸಲು ವ್ಯವಸ್ಥೆ ಮಾಡಿಕೊಡಲಾಗುತ್ತದೆ.) ಹರಕೆ ಕೋಲ ನಡೆಸಲು ಇಚ್ಛಿಸುವ ಭಕ್ತರು ಏ.2ರ ಒಳಗಾಗಿ ದೇವಸ್ಥಾನದ ಕಚೇರಿಯಲ್ಲಿ ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಸುಧೀರ್ ತಿಳಿಸಿದರು. ಏ.4 ರಂದು ಸಂಜೆ 5.30 ಗಂಟೆಗೆ ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆಯು ಗಾಂಧಿ ಮೈದಾನದಿಂದ ಹೊರಡಲಿದೆ. ಮೆರವಣಿಗೆಯಲ್ಲಿ ಕಡಗದಾಳು, ನೀರುಕೊಲ್ಲಿ, ಸಂಪಿಗೆ ಕಟ್ಟೆ, ಮೈಸೂರು ರಸ್ತೆಯ ಡಿಪೊ ಬಳಿ, ಮೈತ್ರಿ ಜಂಕ್ಷನ್ ಸೇರಿದಂತೆ ನಗರದ ನಾಲ್ಕೂ ದಿಕ್ಕುಗಳಿಂದ ಹೊರಡುವ ಕಳಸ ಮೆರವಣಿಗೆಯು ಶ್ರೀ ಮುತ್ತಪ್ಪ ದೇವಾಲಯದ ಕಲಶದೊಂದಿಗೆ ಮಹಿಳೆಯರು ಮತ್ತು ಮಕ್ಕಳ ತಾಲಾಪೊಲಿ, ಕೇರಳದ ಆಕರ್ಷಕ ಕಲಾ ತಂಡಗಳು, ಪುತ್ತೂರಿನ ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯವರ ಭಜನಾ ಕುಣಿತ, ಚಿಂಗಾರಿ ಮೇಳ, ವಿದ್ಯುತ್ ಅಲಂಕೃತ ಮಂಟಪಗಳು ಮೆರವಣಿಗೆಗೆ ಮೆರಗು ನೀಡಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ ಅವರು, ಮೆರವಣಿಗೆಯಲ್ಲಿ ಭಾಗವಹಿಸುವ ಅದೃಷ್ಠವಂತ ಮೂವರು ಮಹಿಳೆಯರು ಮತ್ತು ಪುರುಷರಿಗೆ ಆಕರ್ಷಕ ಬಹುಮಾನ ನೀಡುವುದಾಗಿ ತಿಳಿಸಿದರು. ದೇವಾಲಯದ ಕಲಾ ಮಂದಿರದಲ್ಲಿ ಸಂಜೆ 6 ಗಂಟೆಯಿಂದ ಮಡಿಕೇರಿಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. 9 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಹಲವಾರು ದಾನಿಗಳು, ನಾಡಿನ ಗಣ್ಯರು ಇದರಲ್ಲಿ ಭಾಗವಹಿಸಲಿದ್ದಾರೆ. ನಂತರ 10 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕೊಡಗಿನ ಮತ್ತು ಸ್ಥಳಿಯ ಹೆಸರಾಂತ ಕಲಾತಂಡಗಳು ಹಾಗೂ ಝೀ ಟಿ.ವಿ. ಸರಿಗಮಪ ವಿಜೇತೆ ಸ್ಟಾರ್ ಸಿಂಗರ್ ಪ್ರಗತಿ ಬಡಿಗಾರ್‌ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಡಿಕೇರಿ ಖ್ಯಾತ ನೃತ್ಯ ಶಾಲೆ ಕಿಂಗ್ಸ್ ಕೂರ್ಗ್ ಬಳಗದಿಂದ ನಡೆಸಿಕೊಡಲಿದ್ದಾರೆ. ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, 4.30ಕ್ಕೆ ಶ್ರೀ ಶಾಸ್ತಪ್ಪ ದೇವರ ವೆಳ್ಳಾಟಂ, 5.ಗಂಟೆಗೆ ಶ್ರೀ ಶಾಸ್ತಪ್ಪ ದೇವರ ವೆಳ್ಳಾಟಂ, 5.15 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು. 5.30 ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಶ್ರೀ ಪಾರ್ವತಿ ದೇವಿಗೆ ಪುಷ್ಪಾರ್ಚನೆ ಮತ್ತು ದೀಪಾರಾಧನೆ ನಡೆಯಲಿದೆ. ಸಂಜೆ 7 ಗಂಟೆಗೆ ಶ್ರೀ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ, ರಾತ್ರಿ 9 ಗಂಟೆಗೆ ಪ್ರಸಾದ ವಿತರಣೆ, 9.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 9.30 ಗಂಟೆಗೆ ಶ್ರೀ ಪೊವದಿ ವೆಳ್ಳಾಟಂ, 10.30 ಗಂಟೆಗೆ ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, 12.00 ಶ್ರೀ ಶಿವಭೂತ ತೆರೆ ರಾತ್ರಿ 1 ಗಂಟೆಗೆ ಶ್ರೀ ಗುಳಿಗ ದೇವರ ತೆರೆ, 2 ಗಂಟೆಗೆ ಕಳಗ ಪಾಟ್, ಸಂದ್ಯಾವೇಲೆ, 2.30 ಗಂಟೆಗೆ ಶ್ರೀ ಕುಟ್ಟಿಚಾತನ್ ದೇವರ ತೆರೆ ನಡೆಯಲಿದೆ. ಅಲ್ಲದೇ ಏ.3ರ ಸಂಜೆ 4 ಗಂಟೆಯಿಂದ ಏ.5ರ ಬೆಳಿಗ್ಗೆ 11 ಗಂಟೆಯವರೆಗೆ ತುಲಾಭಾರ ಸೇವೆ ಜರುಗಲಿದೆ. ಏ.5 ರಂದು ಬೆಳಿಗ್ಗೆ 4 ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ತೆರೆ, 5 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿ, 8 ಗಂಟೆಗೆ ಶ್ರೀ ಪೊವ್ವದಿ ತೆರೆ, 9.30 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಬಾರಣೆ, ಮಧ್ಯಾಹ್ನ 11.30 ಕ್ಕೆ ಧ್ವಜ ಅವರೋಹಣ ನಡೆಯಲಿದೆ ಎಂದು ಹೇಳಿದರು. ಪ್ರತಿ ವರ್ಷದಂತೆ ಈ ಬಾರಿಯೂ ಸಾಂಪ್ರದಾಯಿಕ ಮೆರವಣಿಗೆಗೆ ಜಾತಿ ಭೇದವಿಲ್ಲದೆ ಪ್ರತಿ ಮನೆಯಿಂದಲೂ ಮಹಿಳೆಯರು ಮತ್ತು ಮಕ್ಕಳು ತಾಲಾಪೊಲಿ (ದೀಪ) ಮತ್ತು ಪೂರ್ಣಕುಂಭ ಕಲಶದೊಂದಿಗೆ ಶ್ರೀ ಮುತ್ತಪ್ಪ ದೇವರ ಉತ್ಸವ ಕಲಶವನ್ನು ನಗರಪ್ರದಕ್ಷಿಣೆ ಮಾಡುವುದರ ಮೂಲಕ ದೇವಾಲಯಕ್ಕೆ ಬರಮಾಡಿಕೊಂಡು ಎಲ್ಲಾ ದೇವತಾಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ಅಧ್ಯಕ್ಷ ಬಿ.ಕೆ.ರವೀಂದ್ರ ರೈ, ಶ್ರೀ ಮುತ್ತಪ್ಪ ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಸುಬ್ರಮಣಿ, ಖಜಾಂಚಿ ಎನ್.ವಿ.ಉಣ್ಣಿಕೃಷ್ಣ, ಮೆರವಣಿಗೆ ಸಮಿತಿ ಅಧ್ಯಕ್ಷ ಮನು ಮಂಜುನಾಥ್, ಮಹಿಳಾ ವೇದಿಕೆ ಸದಸ್ಯೆ ಕಾಳಚಂಡ ರಾಣಿ ಗಣಪತಿ ಉಪಸ್ಥಿತರಿದ್ದರು.