





ಮಡಿಕೇರಿ ಏ.5 NEWS DESK : ಬಾಬು ಜಗಜೀವನ್ ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರಾಗಿ, ರಕ್ಷಣಾ ಸಚಿವರಾಗಿ ಉತ್ತಮ ಕೆಲಸ, ಕಾರ್ಮಿಕ ಸಚಿವರಾಗಿ ದುಡಿಯುವ ವರ್ಗದ ಹಿತರಕ್ಷಣೆ, ಸಮಾಜದ ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ರಾಷ್ಟ್ರದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ ಜೀವನ ಸಾಧನೆಗಳನ್ನು ಪ್ರತಿಯೊಬ್ಬರೂ ಸ್ಮರಿಸುವಂತಾಗಬೇಕು ಎಂದು ಡಾ.ಮಂತರ್‍ಗೌಡ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗಾಂಧಿಭವನದಲ್ಲಿ ಶನಿವಾರ ನಡೆದ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ 118 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ ಶೋಷಿತರ ಧ್ವನಿಯಾಗಿ, ಮುತ್ಸದ್ದಿ ರಾಜಕಾರಣಿಯಾಗಿ ಡಾ.ಬಾಬು ಜಗಜೀವನ್ ರಾಂ ಅವರ ಬದುಕು ಆದರ್ಶ ಮತ್ತು ಮಾದರಿಯಾಗಿದೆ ಎಂದು ಡಾ.ಮಂತರ್ ಗೌಡ ಅವರು ಹೇಳಿದರು. ಶೋಷಿತ ವರ್ಗಕ್ಕೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಬಾಬು ಜಗಜೀವನ್ ರಾಂ ಅವರು ಶ್ರಮಿಸಿದ್ದು, ಇಂತಹ ಮಹಾನ್ ನಾಯಕರನ್ನು ಸದಾ ಸ್ಮರಿಸುವಂತಾಗಬೇಕು ಎಂದರು. ಬಾಬು ಜಗಜೀವನ್ ರಾಂ ಅವರು ದೇಶ ಕಂಡ ಮುತ್ಸದ್ದಿ ನಾಯಕರಾಗಿದ್ದು, ದೀರ್ಘ ಕಾಲ ಕೇಂದ್ರ ಸರ್ಕಾರದಲ್ಲಿ ಕೃಷಿ, ರಕ್ಷಣೆ, ಕಾರ್ಮಿಕ, ಹೀಗೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು. ರಾಷ್ಟ್ರದ ಪ್ರಗತಿಯಲ್ಲಿ ಪ್ರತಿಯೊಬ್ಬರ ಪ್ರಗತಿಯಿದೆ ಎಂದು ಹೇಳುತ್ತಿದ್ದ ಬಾಬು ಜಗಜೀವನ್ ರಾಂ ಅವರು ದೇಶಕ್ಕೆ ಮಾದರಿ ಮತ್ತು ಅನುಕರಣೀಯ ರಾಜಕಾರಣಿ ಎಂದು ನುಡಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಡಾ.ಶ್ರೀಧರ ಹೆಗಡೆ ಅವರು ಮಾತನಾಡಿ ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ ಆದರ್ಶ ಜೀವನ ಮೌಲ್ಯಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದು ಹೇಳಿದರು. ಬಾಬು ಜಗಜೀವನ್ ರಾಂ ಅವರು ಬಿಹಾರದಲ್ಲಿ ಬಡ ಕುಟುಂಬದಲ್ಲಿ ಜನಿಸಿ ಬಾಲ್ಯ ಜೀವನವನ್ನು ಕಷ್ಟದಿಂದಲೇ ಎದುರಿಸಿದವರು. ತಮ್ಮ ಜೀವನದುದ್ದಕ್ಕೂ ಹೋರಾಟದ ಮೂಲಕ ಬೆಳವಣಿಗೆ ಕಂಡು ರಾಜಕೀಯ ಪ್ರವೇಶ ಮಾಡಿ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಅತ್ಯಂತ ಕಿರಿ ವಯಸ್ಸಿನ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ ಸಾಧನೆ ಬಾಬು ಜಗಜೀವನ್ ರಾಂ ಅವರದ್ದಾಗಿದೆ ಎಂದರು. ಕಾರ್ಮಿಕ ಸಚಿವರಾಗಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಹಲವು ಕಾನೂನು ಜಾರಿಗೊಳಿಸುವ ಮೂಲಕ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಜೊತೆಗೆ ಕೃಷಿ ಸಚಿವರಾಗಿ ದೇಶದ ಆಹಾರ ಉತ್ಪಾದನೆ ಅಭಿವೃದ್ಧಿಗೊಳಿಸಿ ಹಸಿರು ಕ್ರಾಂತಿಯ ಹರಿಕಾರನೆಂದು ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ರೈಲ್ವೆ ಹಾಗೂ ಸಂವಹನ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು ಪ್ರತೀ ಇಲಾಖೆಯ ಸಚಿವರಾದಾಗಲು ತಮ್ಮದೇ ಆದ ಛಾಪು ಮೂಡಿಸಿದ ಕೀರ್ತಿ ಡಾ.ಬಾಬು ಜಗಜೀವನ್ ರಾಂ ಅವರಿಗೆ ಸಲ್ಲುತ್ತದೆ ಎಂದರು. ದೇಶದ ರಕ್ಷಣಾ ಸಚಿವರಾಗಿ ದೇಶದ ಬಾಹ್ಯ ಹಾಗೂ ಆಂತರಿಕ ಭದ್ರತೆಗೆ ಭದ್ರ ಬುನಾದಿ ಹಾಕುವ ಮೂಲಕ ದೇಶದ ಅಭಿವೃದ್ಧಿಗೆ ತಮ್ಮದೇ ಕೊಡುಗೆಯನ್ನು ನೀಡಿದವರು ಎಂದು ಬಾಬು ಜಗಜೀವನ್ ರಾಂ ಅವರ ಆದರ್ಶ ಜೀವನದ ಮೆಲುಕು ಹಾಕಿದರು. ಪ್ರಮುಖರಾದ ಎಚ್.ಎಲ್.ದಿವಾಕರ, ಪ್ರೇಮ ಕೃಷ್ಣಪ್ಪ, ಪ್ರೇಮಕುಮಾರ್, ಮೋಹನ್ ಮೌರ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಸ್ವಾಗತಿಸಿದರು. ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಬಾಲಕೃಷ್ಣ ರೈ ನಿರೂಪಿಸಿ, ವಂದಿಸಿದರು.