




ಮಡಿಕೇರಿ NEWS DESK ಏ.5 : ವಿನಯ್ ಸೋಮಯ್ಯ ಸಾವಿನ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಷಡ್ಯಂತ್ರ ರೂಪಿಸಿರುವುದು ಖಂಡನೀಯವೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶವದ ಮೇಲಿನ ರಾಜಕೀಯವನ್ನು ರಾಜ್ಯದ ಪ್ರಜ್ಞಾವಂತ ಜನತೆ ದಿಕ್ಕರಿಸಬೇಕೆಂದು ಕರೆ ನೀಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಭಾವುಕರಾಗಿ ಮಾತನಾಡಿದ ಪೊನ್ನಣ್ಣ ಅವರು, ಕೊಡಗಿನಾದ್ಯಂತ ಇಬ್ಬರು ಶಾಸಕರು ಕಳೆದ 2 ವಷ೯ಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಯ೯ಗಳನ್ನು ಸಹಿಸಲಾರದೆ ಮತ್ಸರದಿಂದ ವಿನಯ್ ಸಾವಿನ ಪ್ರಕರಣವನ್ನು ಬಳಸಿಕೊಂಡಿರುವ ಬಿಜೆಪಿ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ. ವಾಸ್ತವಾಂಶವನ್ನು ತಿರುಚಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರು ವಿನಯ್ ಮೃತದೇಹವನ್ನು ತೆಗೆಯಲು ಕೂಡ ಬಿಡದೆ ಹೀನ ಮನಸ್ಥಿತಿಯನ್ನು ಬಹಿರಂಗಗೊಳಿಸಿದ್ದಾರೆ. ವಿನಯ್ ಕುಟುಂಬಸ್ಥರ ನೋವಿಗೆ ಧನಿಯಾಗದ ಬಿಜೆಪಿ ನಾಯಕರು ಕಾಂಗ್ರೆಸ್ ನ್ನು ಹಾಗೂ ನಮ್ಮಿಬ್ಬರನ್ನು ಟೀಕಿಸಿ ಸ್ಥಳದಿಂದ ಪಲಾಯನ ಮಾಡುವುದಕ್ಕೆ ಸೀಮಿತರಾಗಿದ್ದಾರೆ ಎಂದು ಆರೋಪಿಸಿದರು. ಸಾವಿನ ಮನೆಯಲ್ಲಿಯೂ ರಾಜಕೀಯ ಮಾಡುವ ಹೀನ ಪ್ರವೃತ್ತಿಯಿಂದ ಬಿಜೆಪಿಯವರು ಹಿಂದೆ ಸರಿಯದೇ ಇರುವುದು ಬೇಸರ ತಂದಿದೆ ಎಂದರು. ವಿನಯ್ ಸಾವಿನಲ್ಲಿ ಕೆಲವೊಂದು ನಿಗೂಢತೆಗಳು ಅಡಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 3-4 ದಿನಗಳಲ್ಲಿ ಸಾವಿನ ಹಿಂದಿನ ನೈಜಾಂಶ ಬೆಳಕಿಗೆ ಬರಲಿದೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕುಶಾಲನಗರಕ್ಕೆ ಬಂದು ವಿನಯ್ ಕುಟುಂಬಕ್ಕೆ ಆಥಿ೯ಕ ನೆರವು ನೀಡಿದ್ದಾರೆ. ಈ ಹಣವನ್ನು ವಾರದ ಮೊದಲೇ ನೀಡಿದ್ದರೆ ಖಂಡಿತವಾಗಿಯೂ ವಿನಯ್ ಆತ್ಮಹತ್ಯೆಯನ್ನು ತಡೆಯಬಹುದಿತ್ತು ಎಂದು ಅಭಿಪ್ರಾಯಪಟ್ಟರು. ವಿನಯ್ ಮೊಬೈಲ್ ನಲ್ಲಿರುವ ಸಂದೇಶದಂತೆ ತಾನು ಯಾರೊಬ್ಬ ಪೊಲೀಸನ ಜೊತೆ ಮಾತನಾಡಿ ಯಾವುದೇ ರೀತಿಯ ಸೂಚನೆ ನೀಡಿದ್ದರೆ ಆ ಬಗ್ಗೆ ಬಿಜೆಪಿಯವರು ದಾಖಲೆ ಸಹಿತ ನಿರೂಪಿಸಲಿ ಎಂದು ಪೊನ್ನಣ್ಣ ಸವಾಲೆಸೆದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಕಳೆದ ನವಂಬರ್ 25 ರಂದು ತಾನು ಕುಶಾಲನಗರ ಸಕಾ೯ರಿ ಆಸ್ಪತ್ರೆಯ ಸಮಸ್ಯೆಗೆ ಸಂಬಂಧಿಸಿದಂತೆ ವಿನಯ್ ಜತೆ ವಾಟ್ಸಪ್ ಕಾಲ್ ನಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದೆ. ವಿನಯ್ ಜೊತೆ ತನಗೆ ಯಾವುದೇ ಸಂಪಕ೯ವೂ ಇಲ್ಲ, ಆತ ಯಾರೆಂದೇ ನನಗೆ ತಿಳದಿಲ್ಲ. ಹೀಗಿರುವಾಗ ಅನವಶ್ಯಕವಾಗಿ ನನ್ನ ಹೆಸರನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೊಡಗಿನ ಪ್ರಗತಿ ಬಗ್ಗೆ ಕಾಳಜಿ ವಹಿಸಿ ಕೋಟಿಗಟ್ಟಲೆ ಅನುದಾನವನ್ನು ಜಿಲ್ಲೆಯ ಅಭಿವೖದ್ದಿಗಾಗಿ ತರುತ್ತಿರುವ ಇಬ್ಬರು ಶಾಸಕರ ಸಾಧನೆ ಸಹಿಸಿಕೊಳ್ಳಲಾಗದ ಬಿಜೆಪಿ ಷಡ್ಯಂತ್ರ ಮಾಡಲು ಮುಂದಾಗಿದೆ. ಜಿಲ್ಲೆಯ ಜನತೆ ಸರಿಯಾಗದ ಪಾಠ ಕಲಿಸಲಿದ್ದಾರೆ ಎಂದೂ ಮಂಥರ್ ಹೇಳಿದರು. ದಿನದ 24 ಗಂಟೆಯೂ ಜನರ ಪರವಾಗಿ ಪಕ್ಷಬೇಧವಿಲ್ಲದೇ ಕೆಲಸ ಮಾಡುತ್ತಿರುವಾಗ ರಾಜಕೀಯ ಪಿತೂರಿ ನಡೆಸುತ್ತಿರುವುದು ಖಂಡನೀಯ. ಅಭಿವೃದ್ಧಿ ಮತ್ತು ಸಾವ೯ಜನಿಕ ಸೇವೆಯ ವಿಚಾರದಲ್ಲಿ ಇನ್ನು ಮುಂದೆಯೂ ರಾಜಿಯಿಲ್ಲದೆ ಕಾಯ೯ನಿವ೯ಹಿಸುವುದಾಗಿ ಹೇಳಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧಮ೯ಜ ಉತ್ತಪ್ಪ ಮಾತನಾಡಿ ವಿನಯ್ ಸಾವಿನ ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿಯೂ ಸಂಬಂಧ ಹೊಂದಿರದೇ ಇದ್ದರೂ ಈವ೯ರು ಶಾಸಕರನ್ನು ದಾಳವಾಗಿರಿಸಿಕೊಂಡಿರುವುದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದರು. ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಪ್ರಮುಖರಾದ ಟಿ.ಪಿ.ರಮೇಶ್, ಮುನೀರ್ ಅಹಮ್ಮದ್, ಕೊಲ್ಯದ ಗಿರೀಶ್ ಉಪಸ್ಥಿತರಿದ್ದರು.