



ಮಡಿಕೇರಿ NEWS DESK ಏ.6 : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಶಾಸಕದ್ವಯರನ್ನು ಅವಹೇಳನ ಮಾಡುವ ಮೂಲಕ ಸಾವಿನಲ್ಲೂ ಬಿಜೆಪಿ ರಾಜಕೀಯ ಲಾಭದ ಲೆಕ್ಕಾಚಾರ ಮಾಡುತ್ತಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಅತ್ಯಂತ ಬೇಸರದ ಬೆಳವಣಿಗೆಯಾಗಿದೆ, ಕಾಂಗ್ರೆಸ್ ಪಕ್ಷ ಸಂತಾಪ ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಬಿಜೆಪಿ ಸಾವಿನಲ್ಲೂ ರಾಜಕೀಯ ಲಾಭ ಹುಡುಕುವುದು ಸರಿಯಲ್ಲ, ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸ್ ನಡೆಸುತ್ತಾರೆ. ತನಿಖಾ ವರದಿ ಬರುವ ಮೊದಲೇ ಬಿಜೆಪಿ ಮಂದಿ ತನಿಖಾಧಿಕಾರಿಗಳಂತೆ ವರ್ತಿಸಿ ಶಾಸಕದ್ವಯರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ. ಜಿಲ್ಲೆಯ ಇಬ್ಬರು ಶಾಸಕರು ಅತ್ಯಂತ ಸಜ್ಜನ ರಾಜಕಾರಣಿಗಳಾಗಿದ್ದಾರೆ, ಇವರ ಬೆಳವಣಿಗೆ ಮತ್ತು ಜನಪ್ರಿಯತೆಯನ್ನು ಬಿಜೆಪಿ ಪ್ರಮುಖರು ಸಹಿಸುತ್ತಿಲ್ಲ. ತಮ್ಮ ರಾಜಕೀಯ ಅಸ್ತಿತ್ವಕ್ಕೆ ದಕ್ಕೆ ಬರುತ್ತದೆ ಎನ್ನುವ ಕಾರಣಕ್ಕಾಗಿ ಪ್ರತಿಯೊಂದು ವಿಚಾರದಲ್ಲಿ ಶಾಸಕರುಗಳನ್ನು ಗುರಿ ಮಾಡುತ್ತಿರುವ ಬಿಜೆಪಿ ಮಂದಿ ಹೋರಾಟದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ. ಈ ಹಿಂದೆ ಡಿವೈಎಸ್‌ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರ ವಿರುದ್ಧ ಕೂಡ ಬಿಜೆಪಿ ಹೀಗೇ ನಡೆದುಕೊಂಡಿತ್ತು. ಆದರೆ ನ್ಯಾಯಾಲಯ ಜಾರ್ಜ್ ಅವರಿಗೆ ನ್ಯಾಯ ನೀಡಿತು ಎಂದು ಹೇಳಿದ್ದಾರೆ. ಇಬ್ಬರು ಶಾಸಕರ ರಾಜಕೀಯ ಬೆಳವಣಿಗೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಪ್ರಮುಖರು ಸಹಿಸುತ್ತಿಲ್ಲ. ವಿನಯ್ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮೊದಲೇ ಶಾಸಕದ್ವಯರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಸಂವಿಧಾನ ಮತ್ತು ಕಾನೂನಿಗೆ ಗೌರವ ನೀಡದ ಬಿಜೆಪಿಯಿಂದ ಕಾಂಗ್ರೆಸ್ ಶಾಸಕರು ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಅಧಿಕಾರವಿಲ್ಲದಾಗ ವಿಚಲಿತಗೊಳ್ಳುವ ಬಿಜೆಪಿ ಮಂದಿ ಸಾವಿನ ಮನೆಯಲ್ಲೂ ರಾಜಕೀಯ ಲಾಭ ಗಳಿಸುವ ಪ್ರಯತ್ನ ಮಾಡುವುದನ್ನು ಜನ ಅರಿತುಕೊಂಡಿದ್ದಾರೆ. ಜನರನ್ನು ಮೂರ್ಖರನ್ನಾಗಿ ಮಾಡಿ ಶಾಸಕದ್ವಯರ ಜನಪ್ರಿಯತೆಯನ್ನು ಕುಗ್ಗಿಸಬಹುದೆನ್ನುವ ಭ್ರಮೆಯಲ್ಲಿ ಬಿಜೆಪಿ ಇದೆ ಎಂದು ಟೀಕಿಸಿದ್ದಾರೆ. ರಾಜಕೀಯ ನೆಲೆ ಕಳೆದುಕೊಂಡಿರುವ ಮಾಜಿ ಸಂಸದರೊಬ್ಬರು ರಾಜಕೀಯ ಅಸ್ತಿತ್ವಕ್ಕಾಗಿ ಕೊಡಗು ಜಿಲ್ಲೆಗೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯಿಂದಲೇ ತಿರಸ್ಕರಿಸಲ್ಪಟ್ಟ ಅವರ ಮಾತಿಗೆ ಜನರು ಕೂಡ ಬೆಲೆ ನೀಡುವುದಿಲ್ಲ. ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಮತ್ತು ಅಭಿವೃದ್ಧಿಪರ ಚಿಂತನೆ ಇರುವ ಶಾಸಕರುಗಳನ್ನು ತೇಜೋವಧೆ ಮಾಡುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಕೆ.ಎ.ಯಾಕುಬ್ ತಿಳಿಸಿದ್ದಾರೆ.