




ಮಡಿಕೇರಿ NEWS DESK ಏ.6 : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಶಾಸಕದ್ವಯರ ವಿರುದ್ಧ ಅಪಪ್ರಚಾದಲ್ಲಿ ತೊಡಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸದಸ್ಯ ಇಸಾಕ್ ಖಾನ್ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಮಾಯಕ ವಿನಯ್ ಅವರ ಸಾವು ಅತ್ಯಂತ ವಿಷಾದಕರ, ಈ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಲಾಭಕ್ಕಾಗಿ ಹವಣಿಸುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ. ಅಭಿವೃದ್ಧಿಪರ ಚಿಂತನೆಯ ಶಾಸಕದ್ವಯರು ಕಳಂಕರಹಿತರಾಗಿದ್ದಾರೆ ಮತ್ತು ಅಲ್ಪಕಾಲದಲ್ಲೇ ಹೆಚ್ಚು ಜನಪ್ರಿಯರಾಗಿದ್ದಾರೆ. ಇದನ್ನು ಸಹಿಸದ ಬಿಜೆಪಿ ರಾಜಕೀಯ ಕುತಂತ್ರ ನಡೆಸುತ್ತಿದೆ. ಕ್ಷುಲ್ಲಕ ರಾಜಕಾರಣದಿಂದ ಬೇಸತ್ತಿದ್ದ ಜನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ದಿಕ್ಕರಿಸಿದ್ದಾರೆ. ಆದರೂ ಬದಲಾಗದ ಬಿಜೆಪಿ ಮಂದಿ ಜನಪರ ಕಾಳಜಿಯ ಕ್ರಿಯಾಶೀಲ ಶಾಸಕರನ್ನು ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜಕೀಯ ವಿಚಾರಗಳಿಗಾಗಿ ಯುವ ಸಮೂಹ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಕುಟುಂಬದವರನ್ನು ಅನಾಥರನ್ನಾಗಿ ಮಾಡಿ ದು:ಖಿತರನ್ನಾಗಿಸುವ ಬದಲು ಸಮಸ್ಯೆಗಳನ್ನು ಪಕ್ಷದ ಪ್ರಮುಖರೊಂದಿಗೆ ಹಂಚಿಕೊಂಡು ಪರಿಹಾರವನ್ನು ಕಂಡುಕೊಳ್ಳುವುದು ಸೂಕ್ತ. ವಿನಯ್ ಸೋಮಯ್ಯ ಅವರಿಗೆ ತೊಂದರೆಯಾದಾಗ ಬಿಜೆಪಿ ನಾಯಕರು ಅವರೊಂದಿಗೆ ಇದ್ದು, ಧೈರ್ಯ ತುಂಬಬಹುದಿತ್ತು. ಆದರೆ ಹಾಗೆ ಮಾಡದೆ ಈಗ ರಾಜಕೀಯ ಲಾಭಕ್ಕಾಗಿ ಮುಗಿಬೀಳುತ್ತಿದ್ದಾರೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಶಾಂತಿ, ಸಹಬಾಳ್ವೆಯ ಮೂಲಕ ಸೌಹಾರ್ದೆತೆಯ ಸಮಾಜ ನಿರ್ಮಿಸುತ್ತಿರುವ ಶಾಸಕದ್ವಯರನ್ನು ತೇಜೋವಧೆ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಇಸಾಕ್ ಖಾನ್ ತಿಳಿಸಿದ್ದಾರೆ.