





ಮಡಿಕೇರಿ ಏ.9 NEWS DESK : ಕೊಡಗು ಜಿಲ್ಲಾ ಕಲಾವಿದರ ಸಂಘದ ವತಿಯಿಂದ ಏ.13 ರಂದು ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ಕಲಾವಿದ ಆಪಾಡಂಡ ಟಿ.ರಘು ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಲಿದೆ ಎಂದು ಹಿರಿಯ ಕಲಾವಿದ ನೆರವಂಡ ಉಮೇಶ್ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯ ಕೆ.ಕೆ.ಗ್ರೂಪ್ ಕಾಂಪ್ಲೆಕ್ಸ್ನ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಶ್ರದ್ಧಾಂಜಲಿ ಸಭೆ ನಡೆಯಲಿದ್ದು, ಕಲಾವಿದರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಹಿರಿಯ ಕಲಾವಿದ ವಾಂಚಿರ ವಿಠಲ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಬ್ರಹ್ಮಗಿರಿ ಪತ್ರಿಕೆಯ ಸಂಪಾದಕ ಉಳ್ಳಿಯಡ ಎಂ.ಪೂವಯ್ಯ, ಜಾನಪದ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಕೆ.ಕೆ.ಗ್ರೂಪ್ನ ಮಾಲೀಕ ಜಗತ್, ದಾನಿ ಕೊಟ್ರಮಾಡ ಲಾಲ ಪೂಣಚ್ಚ ಪಾಲ್ಗೊಳ್ಳಲಿದ್ದಾರೆ ಎಂದರು.ಕನ್ನಡ ಚಿತ್ರರಂಗದಲ್ಲಿ ಎ.ಟಿ.ರಘು ಎಂದೇ ಖ್ಯಾತರಾಗಿದ್ದ ಆಪಾಡಂಡ ಟಿ.ರಘು ಅವರು ರೆಬಲ್ ಸ್ಟಾರ್ ಅಂಬರೀಶ್ ಅವರ ನಾಯಕತ್ವದದಲ್ಲಿ ಅನೇಕ ಚಿತ್ರಗಳನ್ನು ನಿರ್ದೇಶಿಸಿರುವುದಲ್ಲದೆ ಹಲವು ಖ್ಯಾತ ನಟರ ಚಿತ್ರಗಳನ್ನೂ ನಿರ್ದೇಶನ ಮಾಡಿದ್ದಾರೆ. ಕೊಡವ ಭಾಷೆಯಲ್ಲಿ ಐನ್ಮನೆ, ತಾಮನೆ, ಪೊಂಬಳ್ಚ, ಗೆಜ್ಜೆತಂಡ್, ಜಮ್ಮಾಭೂಮಿ, ನಂಗ ಕೊಡವ ಧಾರಾವಾಹಿಗಳನ್ನು ಮನೋಜ್ಞವಾಗಿ ನಿರ್ದೇಶಿಸಿ ಹಲವು ಕಲಾವಿದರನ್ನು ಕಿರುತೆರೆಗೆ ಪರಿಚಯಿಸಿ ಪ್ರೋತ್ಸಾಹಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕೊಡಗಿವರಾದ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹಾಗೂ ಯಶೋಧ ಪ್ರಕಾಶ್ ದಂಪತಿಗಳು ಹಲವು ಕೊಡವ-ಕನ್ನಡ ಚಲಚಿತ್ರಗಳನ್ನು ನಿರ್ಮಾಣ ಮಾಡಿ ದೇಶ ವಿದೇಶದಲ್ಲಿ ಖ್ಯಾತಿ ಗಳಿಸಿದ್ದಾರೆ. ಹಲವು ಉತ್ತಮ ನಿರ್ದೇಶಕರನ್ನು ಕೊಡುಗೆಯಾಗಿ ನೀಡಿರುವ ಆಪಾಡಂಡ ಟಿ.ರಘು ಅವರಿಗೆ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರ ಲಭ್ಯವಾಗದಿರುವುದು ಬೇಸರ ತಂದಿದೆ ಎಂದು ನೆರವಂಡ ಉಮೇಶ್ ತಿಳಿಸಿದರು. ಕಲಾವಿದ ವಾಂಚಿರ ವಿಠಲ್ ನಾಣಯ್ಯ ಅವರು ಮಾತನಾಡಿ, ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಚಿತ್ರವನ್ನು ಕೂಡ ನಿರ್ದೇಶನ ಮಾಡಿದ ಹೆಗ್ಗಳಿಕೆ ಎ.ಟಿ.ರಘು ಅವರದ್ದಾಗಿದೆ. ಇಂತಹ ಸಾಧಕ ಕಲಾವಿದರಿಗೆ ಗೌರವ ಸಲ್ಲಿಸುವುದು ಕಲಾವಿದರ ಜವಾಬ್ದಾರಿಯಾಗಿದೆ. ಆದ್ದರಿಂದ ಕೊಡಗಿನ ಎಲ್ಲಾ ಕಲಾವಿದರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಹಾಗೂ ನಿರ್ಮಾಪಕ, ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ನಿರ್ದೇಶಕ ಆಚೆಯಡ ಗಗನ್ ಗಣಪತಿ, ಕಲಾವಿದ ಬಿದ್ದಂಡ ಉತ್ತಮ್ ಉಪಸ್ಥಿತರಿದ್ದರು.