






ಮಡಿಕೇರಿ ಏ.9 NEWS DESK : ನಿತ್ಯೋಪಯೋಗಿ ವಸ್ತುಗಳ ಬೆಲೆ ಹೆಚ್ಚಳ, ಮುಸ್ಲಿಂ ಓಲೈಕೆ, ಪರಿಶಿಷ್ಟರಿಗೆ ಮೀಸಲಾದ ಹಣದ ಲೂಟಿ ಸೇರಿದಂತೆ ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಾರ್ಟಿ ಇಂದು ನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆರೋಪಗಳ ಬೃಹತ್ ‘ಜನಾಕ್ರೋಶ ಯಾತ್ರೆ’ ನಡೆಸಿತು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಎಂಎಲ್ಸಿ ಸುಜಾ ಕುಶಾಲಪ್ಪ, ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ ಅವರುಗಳನ್ನು ಒಳಗೊಂಡಂತೆ ಪ್ರಮುಖರು ನಗರದ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಳೇ ಖಾಸಗಿ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಿನಯ್ ಸಾವಿಗೆ ನ್ಯಾಯ ದೊರಕಿಸಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮೆರವಣಿಗೆಯ ನಂತರ ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಸಭೆಯನ್ನುದ್ದೇಶಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಮುಸ್ಲಿಂ ಸಮುದಾಯದ ವಿರೋಧಿಯಲ್ಲ. ಬದಲಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಹಿತಕ್ಕೋಸ್ಕರ ಮುಸ್ಲಿಮರನ್ನು ಓಲೈಸುವ ತುಷ್ಟೀಕರಣವನ್ನು ಪಕ್ಷ ತೀವ್ರವಾಗಿ ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಸರ್ಕಾರ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ.4 ರಷ್ಟನ್ನು ಮುಸ್ಲಿಮರಿಗೆ ಮೀಸಲಿರಿಸಿದ್ದು, ಇನ್ನೆಲ್ಲ ಕಾಮಗಾರಿಗಳು ಅವರಿಂದಲೆ ನಡೆಯಲಿದೆ ಎಂದು ಟೀಕಿಸಿದರು. ಮುಸ್ಲಿಂ ಹೆಣ್ಣು ಮಕ್ಕಳ ವಿದೇಶಿ ವ್ಯಾಸಂಗಕ್ಕೆ 30 ಲಕ್ಷವನ್ನು ಸರ್ಕಾರ ಘೋಷಿಸಿದೆ. ಹಿಂದು ಸಮಾಜದಲ್ಲಿ ಬಡ ಹೆಣ್ಣು ಮಕ್ಕಳ ವಿದೇಶಿ ವ್ಯಾಸಂಗಕ್ಕೆ ಅವಕಾಶವಿಲ್ಲವೆ, ಅವರೇನು ಅನ್ಯಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಮುಸ್ಲಿಂ ಹೆಣ್ಣು ಮಕ್ಕಳ ವಿವಾಹಕ್ಕೆ 50 ಸಾವಿರ ರೂ. ನೆರವನ್ನು ಸರ್ಕಾರ ಘೋಷಿಸಿದೆ. ಹಿಂದೂ ಸಮಾಜದಲ್ಲಿ ಬಡ ಹೆಣ್ಣು ಮಕ್ಕಳ ಇಲ್ಲವೆ ಎಂದು ವಿಜಯೇಂದ್ರ ಪ್ರಶ್ನಿಸಿದರು. ವಿನಯ್ ಸೋಮಯ್ಯ ಪ್ರಕರಣಕ್ಕೆ ತಡೆಯಾಜ್ಞೆ ಇದ್ದಾಗಲು ಅವರಿಗೆ ಪೊಲೀಸರಿಂದ ಒತ್ತಡ ಬಂದಿದೆ. ಇಂತಹ ಬೆದರಿಕೆಗಳಿಗೆ ಬಿಜೆಪಿ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ, ಪ್ರಾಣ ಕಳೆದುಕೊಳ್ಳುವ ಕೆಲಸ ಎಂದಿಗೂ ಮಾಡಬೇಡಿ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ ಹಿಂದೂಗಳನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ಕಾರ್ಯಕರ್ತರು ಪಣತೊಡುವಂತೆ ಕರೆ ನೀಡಿದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ವಿವಿಧ ಗಲಭೆಗಳಲ್ಲಿ ಪಾಲ್ಗೊಂಡ ಒಂದು ಸಮೂಹದ 1650 ಮಂದಿಯ ವಿರುದ್ಧದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಮೂಲಕ ಸರ್ಕಾರವೆ ಮತ್ತೆ ಗಲಭೆಗಳಿಗೆ ಹಾದಿ ಮಾಡಿಕೊಟ್ಟಿದೆ ಎಂದು ಆರೋಪಿಸಿದ ಅವರು, ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದರು. ಭ್ರಷ್ಟಾಚಾರ, ಬೆಲೆ ಏರಿಕೆ, ಓಲೈಕೆ ರಾಜಕಾರಣದಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿದ್ದು, ಇದನ್ನು ಜನತೆ ಅರ್ಥ ಮಾಡಿಕೊಂಡು ಕಾಂಗ್ರೆಸ್ ಸಚಿವರು ಹಾಗೂ ಶಾಸಕರು ಜಿಲ್ಲೆಗೆ ಬಂದಾಗ ಛೀಮಾರಿ ಹಾಕಬೇಕೆಂದು ತಿಳಿಸಿದರು. ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಅವಧಿಯಲ್ಲಿ ಗೋ ಹತ್ಯೆ ಪ್ರಕಣಗಳು ಹೆಚ್ಚಾಗಿದೆ. ಮತ್ತೊಂದೆಡೆ ಬೆಲೆ ಹೆಚ್ಚಳದ ಮೂಲಕ ಜನರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವಾಗುತ್ತಿದೆ. ಇಂತಹ ತುಘಲಕ್ ಸರ್ಕಾರ ತೊಲಗಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಆಯ್ಕೆಯಾದ ಇಬ್ಬರು ಶಾಸಕರುಗಳಿದ್ದು, ಇವರುಗಳನ್ನು ವಿನಯ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿಸಬೇಕು ಮತ್ತು ಒಟ್ಟು ಪ್ರಕಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದರು. ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ವಿನಯ್ ಅವರ ಸಾವಿಗೆ ನ್ಯಾಯವನ್ನು ಪಡೆದುಕೊಂಡೇ ತೀರುತ್ತೇವೆ. ಮುಂದೆ 2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರಲಿದ್ದು, ಆ ಸಂದರ್ಭ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಕಾರಣರಾದವರು ಪಾತಾಳದಲ್ಲಿ ಬಚ್ಚಿಟ್ಟುಕೊಂಡಿದ್ದರು ಹಿಡಿದು ಜೈಲಿನಲ್ಲಿ ಕೂರಿಸುವ ಕೆಲಸ ಮಾಡಿಯೇ ತೀರುವುದಾಗಿ ಹೇಳಿದರು.
ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಮಾತನಾಡಿ, ವಿನಯ್ ಸೋಮಯ್ಯ ಅವರ ಡೆತ್ ನೋಟ್ನಲ್ಲಿ ಸೂಚಿಸಿರುವಂತೆ ಜಿಲ್ಲೆಯ ಶಾಸಕರನ್ನು ಪ್ರಕರಣದಲ್ಲಿ ಸೇರಿಸಬೇಕೆಂದು ಒತ್ತಾಯಿಸಿದರು. ರಾಜ್ಯದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ, ಎಸ್ಸಿ ಎಸ್ಟಿ ಅಭ್ಯುಯದಕ್ಕಾಗಿ ಮೀಸಲಿಟ್ಟ ಹಣದ ದುರ್ಬಳಕೆ, ನೂತನ ವಿವಿಗಳನ್ನು ಮುಚ್ಚುವ ತೀರ್ಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡರುಗಳಾದ ರಾಜೇಂದ್ರ, ಉದಯ ಕುಮಾರ್ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಮುಖರಾದ ರೀನಾ ಪ್ರಕಾಶ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮೈಸೂರು ಶಾಸಕ ಶ್ರೀವತ್ಸ, ಮಾಜಿ ಶಾಸಕ ಪ್ರೀತಂ ಗೌಡ, ಜಿಲ್ಲೆಯ ಪದಾಧಿಕಾರಿಗಳಾದ ಶಾಂತೆಯಂಡ ರವಿ ಕುಶಾಲಪ್ಪ, ಬಿ.ಬಿ.ಭಾರತೀಶ್, ರಾಬಿನ್ ದೇವಯ್ಯ, ನಾಗೇಶ್ ಕುಂದಲ್ಪಾಡಿ, ಕಾಂತಿ ಸತೀಶ್, ಅನಿತಾ ಪೂವಯ್ಯ, ಕಾಂಗೀರ ಸತೀಶ್, ಮಹೇಶ್ ಜೈನಿ, ಬಿ.ಕೆ.ಜಗದೀಶ್, ವಿ.ಕೆ.ಲೋಕೇಶ್, ಉಮೇಶ್ ಸುಬ್ರಮಣಿ, ಅಪ್ರು ರವೀಂದ್ರ, ಸುವಿನ್ ಗಣಪತಿ, ಪಿ.ಎಂ.ರವಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.