






ಮಡಿಕೇರಿ ಏ.10 NEWS DESK : ನಗರದ ಕಾಲೇಜು ರಸ್ತೆಯ ಹೃದಯ ಭಾಗದಲ್ಲಿ ಮನೆಯೊಂದಕ್ಕೆ ನುಗ್ಗಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಂಧಿತ ವ್ಯಕ್ತಿಗೆ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ನಗರದ ಹೊರ ವಲಯದ ಪ್ರತಿಷ್ಠಿತ ರೆಸಾರ್ಟ್‍ನಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ನಿವಾಸಿ ವಿಕಾಸ್ ಜೋರ್ಡಿಯಾ(35) ಎಂಬಾತನೇ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯಾಗಿದ್ದಾನೆ.
::: ಪ್ರಕರಣದ ಹಿನ್ನೆಲೆ ::: ಸಾಕಮ್ಮ ಪ್ರಭಾಕರ್ ಎಂಬುವವರು 2023ರ ನವೆಂಬರ್ 5ರಂದು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಅಪರಿಚಿತ ವ್ಯಕ್ತಿ ಏಕಾಏಕಿ ನುಗ್ಗಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಅಲ್ಲದೆ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಮತ್ತು ಕೈ ಬೆರಳಿನಲ್ಲಿದ್ದ ಉಂಗುರವನ್ನು ಕಸಿದುಕೊಂಡು ಹೋಗಿರುವ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ರೆಸಾರ್ಟ್ ಒಂದರಲ್ಲಿ ಕೆಲಸ ಮಾಡುತಿದ್ದ ರಾಜಸ್ಥಾನ ಮೂಲದ ನಿವಾಸಿ ವಿಕಾಸ್ ಜೋರ್ಡಿಯಾ ಎಂಬಾತನನ್ನು 2023ರ ನವೆಂಬರ್ 6ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ತನಿಖಾಧಿಕಾರಿ ಅನೂಪ್ ಮಾದಪ್ಪ ಅವರು ಆರೋಪಿ ವಿಕಾಸ್ ಜೋರ್ಡಿಯಾ ವಿರುದ್ಧ ನಗರದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ 2024ರ ಜನವರಿ 2ರಂದು ದೋಷರೋಪಣ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಹಲ್ಲೆ ಮಾಡಿ ದರೋಡೆ ಮಾಡಿರುವ ಅಪರಾಧಕ್ಕಾಗಿ ಪ್ರಕರಣದ ಆರೋಪಿ ವಿಕಾಸ್ ಜೋರ್ಡಿಯಾನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ರೂ. 15 ಸಾವಿರ ರೂ.ದಂಡ ವಿಧಿಸಿದೆ. ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ 3 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರಾದ ಜಿ.ಪ್ರಶಾಂತಿ ಅವರು ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ದೇವೇಂದ್ರ.ಎನ್.ಪಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದರು.