







ಮಡಿಕೇರಿ ಏ.11 NEWS DESK : ಕೊಡವರ ಹೊಸ ವರ್ಷಾಚರಣೆ ಎಡ್ಮ್ಯಾರ್ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಏ.14 ರಂದು ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ವಸಂತ ಋತು ಫೆ.15 ರಿಂದ ಆರಂಭಗೊಂಡು ಏ.14ಕ್ಕೆ ಕೊನೆಗೊಳ್ಳುವ “ ಎಡ್ಮ್ಯಾರ್ 1′ ನ್ನು ಸಿಎನ್‌ಸಿ ಸಂಘಟನೆ ಪ್ರತಿವರ್ಷ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದು 30ನೇ ವರ್ಷದ ಕಾರ್ಯಕ್ರಮವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಏ.14 ರಂದು ಸಂಜೆ 6.30ಗಂಟೆಗೆ ಗೋಣಿಕೊಪ್ಪಲಿನ ಆರ್‌ಎಂಸಿ ಯಾರ್ಡ್ ಬಳಿಯಿಂದ ದುಡಿಕೊಟ್ಟ್ ಪಾಟ್ ನೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಂಜಿನ ಮೆರವಣಿಗೆ ಸಾಗಿ ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಕೊನೆಗೊಳ್ಳಲಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗ ಕೊಡವರ ಹಕ್ಕುಗಳ ಕುರಿತು ಕಾರ್ಯಕ್ರಮದಲ್ಲಿ ಪ್ರತಿಪಾದನೆ ಮಾಡುವ ಮೂಲಕ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲಾಗುವುದು. ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಪ್ರಚುರಪಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ಏಪ್ರಿಲ್ 13 ಭಾನುವಾರದಂದು ಬೆಳಿಗ್ಗೆ 7 ಗಂಟೆಗೆ ಮಡಿಕೇರಿ ತಾಲ್ಲೂಕಿನ ಬೆಂಗ್ ನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಕೂಪದಿರ ಒಕ್ಕದ ಮೋಹನ್ ಅವರ ಭೂಮಿಯಲ್ಲಿ ಜೋಡೆತ್ತುಗಳ ಮೂಲಕ ಸಿಎನ್‌ಸಿ ಅಧ್ಯಕ್ಷ ಎನ್‌ಯು ನಾಚಪ್ಪ ಕೊಡವ ಉಳುಮೆ ಮಾಡುವ ಮೂಲಕ “ ಎಡ್ಮ್ಯಾರ್ ಆಚರಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕೊಡವ ಶಾಸ್ತ್ರದ ಪ್ರಕಾರ ಸೋಮವಾರದಂದು ಗೋವುಗಳನ್ನು ಉಳುಮೆಗೆ ಬಳಸುವುದು ನಿಷಿದ್ಧ ಮತ್ತು ಧರ್ಮ ಬಾಹಿರವಾಗಿದೆ. ಈ ವರ್ಷ ಅಂದರೆ 2025ನೇ ಇಸವಿಯಲ್ಲಿ ಸೋಮವಾರದಂದು ಎಡ್ಮ್ಯಾರ್ -1 ಬರುವುದರಿಂದ ಅಂದು ಗೋವುಗಳ ಮೂಲಕ ಗದ್ದೆ ಉಳುಮೆ ಮಾಡಲಾಗುವುದಿಲ್ಲ. ಆದ್ದರಿಂದ ಕೊಡವ ಶಾಸ್ತ್ರದ ಪ್ರಕಾರದ ಗದ್ದೆ ಉಳುಮೆ ಕಾರ್ಯವನ್ನು ಜೊಡೆತ್ತುಗಳ ಮೂಲಕ ಏಪ್ರೆಲ್ 13 2025ರ ಭಾನುವಾರದಂದು ನಡೆಸಲಾಗುವುದು.