








ಮಡಿಕೇರಿ, ಏ.12 NEWS DESK : ನಿರಂತರ ಅಭ್ಯಾಸದಿಂದ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಪರಿಪೂರ್ಣತೆ ಹೊಂದಲು ಸಾಧ್ಯವೆಂದು ಮಾಜಿ ಒಲಂಪಿಯನ್, ಭಾರತ ತಂಡದ ಮಾಜಿ ನಾಯಕ ಮನೆಯಪಂಡ ಎಂ.ಸೋಮಯ್ಯ ಹೇಳಿದರು. ದಿ. ಸಿ.ವಿ. ಶಂಕರ್ ಸ್ಮರಣಾರ್ಥ ವಾಂಡರರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಕ್ಕಳ ಉಚಿತ ಬೇಸಿಗೆ ಶಿಬಿರಕ್ಕೆ ಆಗಮಿಸಿದ ಅವರು ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು. ವಾಂಡರರ‍್ಸ್ ಕ್ಲಬ್ ವತಿಯಿಂದ ಏರ್ಪಡಿಸಿರುವ ಈ ಶಿಬಿರದಲ್ಲಿ ಶಿಸ್ತು, ವ್ಯಯಾಮ, ಯೋಗಾಭ್ಯಾಸ ಕೂಡ ಕಲಿಸಿಕೊಡಲಾಗುತ್ತದೆ. ಇದು ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸಲು ಸಹಕಾರಿಯಾಗಲಿದೆ. ಕೇವಲ ಒಂದು ತಿಂಗಳ ಅಭ್ಯಾಸದಿಂದ ಪರಿಪೂರ್ಣತೆ ಸಾಧ್ಯವಾಗುವದಿಲ್ಲ. ಶಿಬಿರದ ಬಳಿಕವೂ ಅಭ್ಯಾಸ ಮಾಡಬೇಕು. ನಿರಂತರ ಅಭ್ಯಾಸದಿಂದ ಮಾತ್ರ ಕ್ರೀಡೆಯಲ್ಲಿ ಪರಿಪೂರ್ಣತೆ ಹೊಂದಲು ಸಾಧ್ಯವೆಂದು ಕಿವಿ ಮಾತು ಹೇಳಿದರು. ಮಕ್ಕಳು ಉತ್ತಮ ನಡತೆ ಮೈಗೂಡಿಸಿಕೊಳ್ಳಬೇಕು. ರಾತ್ರಿ ಬೇಗನೇ ನಿದ್ರಿಸಿ, ಬೆಳಿಗ್ಗೆ ಬೇಗನೇ ಎದ್ದೇಳುವುದರಿಂದ ಅರೋಗ್ಯವಾಗಿರಲು ಸಾಧ್ಯವಾಗುತ್ತದೆ. ಉತ್ತಮ ಗೆಳೆತನ ಹೊಂದಿದವರು ಉತ್ತಮ ಕ್ರೀಡಾ ಪಟುಗಳಾಗಲು ಸಾಧ್ಯ. ಈ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಇರಬೇಕು. ಈ ಶಿಬಿರದಲ್ಲಿ ತರಬೇತಿ ಪಡೆದವರು ಮುಂದೊಂದು ದಿನ ರಾಜ್ಯ – ರಾಷ್ಟ್ರ ಮಟ್ಟದಲ್ಲಿ ಆಡುವದನ್ನು ಎದುರು ನೋಡುವುದಾಗಿ ಹೇಳಿದರು. ಶಿಬಿರದಲ್ಲಿ ೧೫೦ಕ್ಕೂ ಅಧಿಕ ಮಕ್ಕಳು ಭಾಗವಹಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ವಾಂಡರರ‍್ಸ್ ಸೋರ್ಟ್ಸ್ ಕ್ಲಬ್ ಅದ್ಯಕ್ಷ ಕೋಟೇರ ಮುದ್ದಯ್ಯ, ಶಿಬಿರದ ಸಂಚಾಲಕ ಬಾಬು ಸೋಮಯ್ಯ, ಹಿರಿಯ ಹಾಕಿ ಆಟಗಾರ ಚುಮ್ಮಿ ದೇವಯ್ಯ, ತರಬೇತುದಾರರಾದ ಬೊಪ್ಪಂಡ ಶ್ಯಾಂ ಪೂಣಚ್ಚ, ಕುಡೆಕಲ್ ಸಂತೋಷ್, ಬಿ.ಸಿ. ತಿಲಕ್, ಲೋಕೇಶ್ ನಾಯ್ಡು, ಕೋಟೇರ ನಾಣಯ್ಯ, ಕೇನೇರ ಕಾವ್ಯ, ನಾಟೋಳಂಡ ಸುರೇಶ್, ಬಿದ್ದಂಡ ನರೇನ್, ಬೆಳ್ಯಪ್ಪ, ಹರೇಂದ್ರ, ಶಿಬಿರಾರ್ಥಿಗಳು, ಪೋಷಕರು, ಕೊಡಗು ವಿದ್ಯಾಲಯದ ಬೇಸಿಗೆ ಶಿಬಿರದ ಶಿಬಿರಾರ್ಥಿಗಳು, ತರಬೇತುದಾರರು ಇದ್ದರು.