








ಗೋಣಿಕೊಪ್ಪ ಏ.12 NEWS DESK : ಕ್ಷೇತ್ರದಲ್ಲಿದ್ದ ಕೆಂಪು ರಸ್ತೆಗಳೆಲ್ಲವೂ 15 ವರ್ಷಗಳಲ್ಲಿ ಕಪ್ಪು ಬಣ್ಣಗಳಾಗಿ ಬದಲಾವಣೆಗೊಂಡಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಜಿ ಬೋಪಯ್ಯ ನುಡಿದಿದ್ದಾರೆ. ಮಲ್ಲೂರು ಗ್ರಾಮಸ್ಥರು ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ರಾಜಕಾರಣಿಗಳಿಗೆ ಟೀಕೆಗಳು ಸಹಜವಾದುದ್ದೆ. ಆದರೆ ವಿನಾಕಾರಣ ವೈಯಕ್ತಿಕ ಟೀಕೆಗಳು ಉಪಯುಕ್ತವಲ್ಲ ಎಂದು ಹೇಳಿದರು. ಮಾಡಿರುವ ಕಾರ್ಯವನ್ನು ವಿಶಾಲ ಮನಸ್ಥಿತಿಯಿಂದ ಒಪ್ಪಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ವಿನಾಕಾರಣ ಸುಮ್ಮನೆ ಆರೋಪ ಹೊರಿಸುವ ಉದ್ದೇಶ ಗೌರವಿತವಾದದ್ದಲ್ಲ ಎಂದು ಹೇಳಿದರು. ಕಳೆದ 20 ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಮತದಾರರು ನೀಡಿದ ಆಶೀರ್ವಾದದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸರ್ಕಾರದ ನಯ ಪೈಸವು ವ್ಯರ್ಥವಾಗದಂತೆ ಕ್ಷೇತ್ರಕ್ಕೆ ಬಳಸಿಕೊಳ್ಳಲಾಗಿದೆ. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಬದಲಾವಣೆಗೆ ಹುಸಿ ಆರೋಪಗಳನ್ನ ಅಲಂಕರಿಸುತ್ತಿರುವುದು ವೇದನೆಯ ವಿಚಾರ ಎಂದರು. ಕ್ಷೇತ್ರದ ಅಭಿವೃದ್ಧಿ ಕಾಣಬೇಕೆಂಬ ಉದ್ದೇಶದಲ್ಲಿ ಪಾರದರ್ಶಕತೆಯಿಂದ ಜವಾಬ್ದಾರಿಯನ್ನು ನಿಭಾಯಿಸಲಾಗಿದೆ. ಕಾವೇರಿ ಹುಟ್ಟಿದ ಈ ಮಣ್ಣಿನಲ್ಲಿ ಯಾರೇ ಅನ್ಯಾಯ ಮಾಡಿದರು ಅದು ದೀರ್ಘಾಯುಷ್ಯವು ಅಲ್ಲ ಎಂಬ ಹಿರಿಯರ ಎಚ್ಚರಿಕೆಯ ನುಡಿಯನ್ನು ರಾಜಕೀಯದುದ್ದಕ್ಕೂ ಅನುಸರಿಸಲಾಗಿದೆ. ಯಾವುದೇ ಪಕ್ಷದಿಂದ ಗೆದ್ದು ಬಂದರೂ ಆತ ಸಾರ್ವಜನಿಕ ಸೇವಕ ಎಂಬುದನ್ನ ಮನಗಾಣಬೇಕು. ಯಾವುದೇ ಗುಂಪು ಸಮುದಾಯಗಳಿಗೆ, ಸೀಮಿತವಾಗದೆ, ಪ್ರತಿಯೊಬ್ಬರ ಮತ್ತು ಪ್ರತಿಯೊಂದು ಸಮಸ್ಯೆಗಳಿಗೂ ಸ್ಪಂದಿಸುವ ಗುಣಗಳನ್ನ ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ನಾಯಕನಾಗಲು ಅರ್ಹತೆಯನ್ನು ಹೊಂದುತ್ತಾನೆ. ಈ ತತ್ವವನ್ನು ಬಹು ಗಂಭೀರವಾಗಿ ಅಳವಡಿಸಿಕೊಂಡು 20 ವರ್ಷಗಳು ಜನಸೇವಕನಾಗಿ ಕಾರ್ಯನಿರ್ವಹಿಸಿದ ತೃಪ್ತಿಯನ್ನು ಹೊಂದಿದ್ದೇನೆ ಎಂದು ಹೇಳಿದರು.
ಕೋವಿಡ್ ಕಾಲದಲ್ಲಿ ಕ್ಷೇತ್ರದ ಜನರ ಆರೋಗ್ಯದ ಕಾಳಜಿಯನ್ನಿಟ್ಟು ಕಾರ್ಯನಿರ್ವಹಿಸಿದ್ದೇನೆ. ಕಾವೇರಿ ನೀರಾವರಿ ಮಂಡಳಿಯ ಅನುದಾನವನ್ನು ಕ್ಷೇತ್ರಕ್ಕೆ ಬಳಕೆ ಮಾಡಿಕೊಂಡ ಹೆಮ್ಮೆಯಿದೆ ಎಂದರು. ಮಲ್ಲರೂ ಗ್ರಾಮದ ಗ್ರಾಮಾಭಿವೃದ್ಧಿ ಸಮಿತಿ ಪ್ರಧಾನ ಸಂಚಾಲಕ ಚಕ್ಕೇರ ಸೂರ್ಯ ಅಯ್ಯಪ್ಪ, ಎಂ.ಎಲ್.ಸಿ. ಸುಜಾಕುಶಾಲಪ್ಪ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಬಾಳೆಲೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ನಿಟ್ಟೂರು ಗ್ರಾ.ಪಂ. ಅಧ್ಯಕ್ಷೆ ಪಿ.ಎ.ಅಮ್ಮುಣಿ, ಉಪಾಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಸದಸ್ಯರುಗಳಾದ ಪಡಿಜ್ಞಾರಂಡ ಕವಿತಾ, ಅಳಮೇಂಗಡ ಪವಿತಾ ರಮೇಶ್, ಬಾಳೆಲೆ ಸೆಂಟರ್ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಗ್ರಾ.ಪಂ. ಅಧಕ್ಷೆ ಕೊಕ್ಕೇಂಗಡ ಸ್ಮಿತಾ, ಒಲಂಪಿಯನ್ ಕರ್ನಲ್ ಬಾಳೇರ ಸುಬ್ರಮಣಿ, ಉಪನ್ಯಾಸಕಿ ನಳಿನಾಕ್ಷಿ ಮತ್ತು ನಿಟ್ಟೂರು, ಬಾಳೆಲೆ, ಮಲ್ಲೂರು ಗ್ರಾಮಸ್ಥರು ಇದ್ದರು.