







ಮಡಿಕೇರಿ ಏ.15 NEWS DESK : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ವಿವಿಧ ಗೌಡ ಸಮಾಜಗಳ ಒಕ್ಕೂಟಗಳ ಸಹಯೋಗದೊಂದಿಗೆ ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಆಯೋಜನೆಗೊಂಡ ಅರೆಭಾಷೆ ಗಡಿನಾಡ ಉತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಕರಿಕೆ ಗೇಟ್ ಬಳಿಯಿಂದ ಉತ್ಸವದ ಸಭಾಂಗಣದ ತನಕ ಮೆರವಣಿಗೆಯಲ್ಲಿ ಇತರ ಗಣ್ಯ ಅತಿಥಿಗಳೊಂದಿಗೆ ಹೆಜ್ಜೆ ಹಾಕಿದ ಶಾಸಕರು, ಬಳಿಕ ಸಾಂಪ್ರದಾಯಿಕ ವಸ್ತು ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಅರೆಭಾಷೆ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಡೆಮಿಯ ಮೇಲೆ ಗುರುತರವಾದ ಜವಾಬ್ದಾರಿ ಇದ್ದು, ಇದೇ ರೀತಿಯ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷೆ ಹಾಗೂ ಸಂಸ್ಕೃತಿಯ ಏಳಿಗೆಗೆ ಶ್ರಮಿಸುವಂತೆ ಕರೆ ನೀಡಿದರು. ವಿಶಿಷ್ಟವಾದ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೊಂದಿದ ಅರೆಭಾಷಿಕರು ಕೊಡಗು ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಮತ್ತು ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ನಾಡಿಗೆ ಹಾಗೂ ದೇಶಕ್ಕೆ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿರುವುದು ಹಾಗೂ ಪ್ರಸ್ತುತ ಅನೇಕ ಉನ್ನತ ಹುದ್ದೆಯಲ್ಲಿ ಇರುವುದು ಸಮಾಜಕ್ಕೆ ಹೆಮ್ಮೆ ತರುವಂತ ವಿಷಯ.
ಅರೆಭಾಷೆ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ನಾಡಿನಾದ್ಯಂತ ಪ್ರಚಾರ ಪಡಿಸುವಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು. ಆದಿಚುಂಚನಗಿರಿ ಹಾಸನ ಮಠದ ಸ್ವಾಮೀಜಿಗಳು, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮತ್ತು ಅತಿಥಿಗಳು ಉಪಸಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.